ಮಂಜೇಶ್ವರ: ದಿನದಿಂದ ದಿನಕ್ಕೆ ಮಳೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ವರ್ಕಾಡಿ ಗ್ರಾಮ ಪಂಚಾಯತು ಏಳನೇ ವಾರ್ಡು ವ್ಯಾಪ್ತಿಯಲ್ಲಿರುವ ಬಾಕ್ರಾಬೈಲ್ ಕಜೆ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಭೂ ಕುಸಿತದ ಅನುಭವಾಗಿರುವ ಹಿನ್ನೆಲೆಯಲ್ಲಿ ಇದೀಗ ಭೀತಿಯಲ್ಲಿ ದಿನಗಳೆಯುತ್ತಿದ್ದಾರೆ.
ಇದೀಗ ಭೂ ಕುಸಿತದ ಅನುಭವಾಗಿರುವ ಸುಮಾರು ಎರಡು ಎಕ್ರೆ ಭೂ ಪ್ರದೇಶದಲ್ಲಿ ಭೂಮಿಯಲ್ಲಿ ಕೆಲವು ಕಡೆ ಭಾರಿ ಗಾತ್ರದ ಹಾಗೂ ಕೆಲವಡೆ ಸಣ್ಣ ಗಾತ್ರದ ಬಿರುಕು ಕಂಡು ಬಂದಿದೆ . ಇಲ್ಲಿ ವಾಸವಾಗಿದ್ದ ಆಹ್ಮದ್ ಕುಂಞ, ಮೊಹಮ್ಮದ್ , ಇಸ್ಮಾಯಿಲ್ ಎಂಬವರನ್ನು ಸುರಕ್ಷಿತವಾದ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಈ ಪ್ರದೇಶ ವಿಶಾಲ ಕೃಷಿ ಸಂಪನ್ಮೂಲವನ್ನು ಹೊಂದಿರುವ ಸ್ಥಳವಾಗಿದ್ದು ಭೂಮಿಯಲ್ಲಿ ಬಿರುಕು ಕಂಡು ಬಂದಿರುವ ಹಿನ್ನೆಲೆಯಲ್ಲಿ ಕೃಷಿಕರು ಕೂಡಾ ಆತಂಕದಲ್ಲಿದ್ದಾರೆ . ಕಜೆ ಪ್ರದೇಶಕ್ಕೆ ಸಮೀಪವಿರುವ ಬಾಕ್ರಾಬೈಲ್ ಪ್ರದೇಶದಲ್ಲೂ ಭೂ ಕುಸಿತ ಉಂಟಾಗಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ.
ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವರ್ಕಾಡಿ ಪಂ. ಅಧಿಕೃತರೆಲ್ಲರೂ ಕ್ವಾರಂಟೈನ್ ನಲ್ಲಿರುವ ಕಾರಣ ಪಂ. ಅಧ್ಯಕ್ಷ ಫೆÇೀನ್ ಮೂಲಕ ಮಾಹಿತಿ ಕಲೆ ಹಾಕಿರುವುದಾಗಿ ಊರವರು ಹೇಳಿದ್ದಾರೆ.
ಮೀಯಪದವು, ಬಾಯಾರು ಸೇರಿದಂತೆ ಸಮೀಪದ ಹಲವು ಪ್ರದೇಶಗಳಲ್ಲೂ ಅನಧಿಕೃತ ಕ್ವಾರಿ ದಂಧೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾಫಿಯಾಯಗಳ ಅಟ್ಟಹಾಸ ಅತಿಯಾಗುತ್ತಿದ್ದು ಇದು ಇಂತಹ ಭೂ ಕುಸಿತಕ್ಕೆ ಕಾರಣವಾಗುತ್ತಿರುವುದಾಗಿ ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವೊಂದು ಅಧಿಕಾರಿಗಳು ಮಾಫಿಯಾಗಳೊಂದಿಗೆ ಕೈ ಜೋಡಿಸಿ ಜೇಬನ್ನು ತುಂಬಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರ ದೂರುಗಳು ಕಸದ ಬುಟ್ಟಿಗೆ ಸೇರುತ್ತಿರುವುದಾಗಿ ಊರವರು ಆರೋಪಿಸುತಿದ್ದಾರೆ. ಸಂಬಂಧಪಟ್ಟವರು ಅನಧಿಕೃತ ಕ್ವಾರಿ ಮಾಫಿಯಾಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದದ್ದು ಅನಿವಾರ್ಯವಾಗಿದೆ. ಜೇಬನ್ನು ತುಂಬಿಸಿ ಮಾಫಿಯಾಗಳೊಂದಿಗೆ ಕೈ ಜೋಡಿಸುವ ಅಧಿಕಾರಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗದೆ ಇದ್ದರೆ ಮಂಜೇಶ್ವರ, ಬಾಯಾರು, ಮೀಯಪದವು ಪರಿಸರದ ಹಲವು ಭಾಗಗಳಲ್ಲಿ ಇನ್ನೂ ಹೆಚ್ಚಿನ ಭೂಕುಸಿತಗಳು ಸಂಭವಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಾವು ನೋವುಗಳು ಸಂಭವಿಸುವ ಸಾಧ್ಯತೆ ಇರುವುದಾಗಿ ಊರವರು ಹೇಳುತ್ತಿದ್ದಾರೆ.