ಕುಂಬಳೆ: ಶ್ರೀರಾಮ ನೈವೇದ್ಯಕ್ಕಾಗಿ ಭತ್ತದ ಭಕ್ತಿಯ ಮೂಲಕ ಶ್ರೀರಾಮಚಂದ್ರಾಪುರ ಮಠದ ಶಿಷ್ಯವೃಂದದವರು ಮುಳ್ಳೇರಿಯ ಮಂಡಲದ ಕುಂಬಳೆ ಸೀಮಾ ವ್ಯಾಪ್ತಿಯಲ್ಲಿ ಭತ್ತದ ಬೇಸಾಯದ ಅಭಿಯಾನ ಆರಂಭಿಸಿದ್ದಾರೆ. ತನ್ಮೂಲಕ ಬೇಸಾಯಕ್ಕೆ ಕೆಲವೊಂದು ಗದ್ದೆಗಳು ಸಜ್ಜಾಗಿದ್ದು, ಭತ್ತದ ಪೈರುಗಳಿಂದ ಕಂಗೊಳಿಸಲಿದೆ. ಶ್ರೀಮಠದ ಶಿಷ್ಯವೃಂದದವರು ಉತ್ಸಾಹದಿಂದ ಶ್ರಮದಾನದ ಮೂಲಕ ಈ ಸೇವಾಕಾರ್ಯಕ್ಕೆ ಇಳಿದಿದ್ದು, ವಿವಿಧ ಗದ್ದೆಗಳ ಮಾಲಕರು ಜೊತೆಗೂಡಿದ್ದಾರೆ.
ಏತಡ್ಕ, ಬಡಗಮೂಲೆ, ಕಾನತ್ತಿಲ, ಕನ್ನೆಪ್ಪಾಡಿ, ಪೆರ್ಣೆ, ಕಿನ್ನಿಂಗಾರು ಇತ್ಯಾದಿ ಕೇಂದ್ರಗಳಲ್ಲಾಗಿ ಸುಮಾರು 3.5 ಎಕ್ರೆ ಸ್ಥಳಗಳಲ್ಲಿ ಭತ್ತದ ಬೇಸಾಯದ ಕಾರ್ಯ ಆರಂಭವಾಗಿದೆ. ಪ್ರಸ್ತುತ ಸನ್ನಿವೇಶಕ್ಕೆ ಹೊಂದಿಕೊಂಡು ಶ್ರೀ ಮಠದ ಶಿಷ್ಯವೃಂದದವರು ಗದ್ದೆಗಿಳಿದು ಕಾಡುಗಳನ್ನು ಕಡಿಯುವುದು, ಗೊಬ್ಬರ ಹಾಕುವುದು, ನೇಜಿ ನೆಡುವುದು ಇತ್ಯಾದಿ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿಯೊಂದು ಸ್ಥಳಗಳಲ್ಲಿಯೂ ಯೋಜನೆ ಬಗ್ಗೆ ತಿಳಿಸಿದಾಗ ರಾಮನ ಸೇವೆಗೆ ಈ ಭೂಮಿ ಬಳಕೆಯಾಗುವುದಾದರೆ ಅದಕ್ಕಿಂತ ಪುಣ್ಯದ ಕೆಲಸ ಬೇರೆ ಏನಿದೆ ಎಂಬ ಉದ್ಗಾರ ಭೂಮಿ ಕೊಟ್ಟವರಿಂದ ಬಂದಿದೆ ಎಂಬುದಾಗಿ ಸಂಘಟಕರು ತಿಳಿಸಿದ್ದಾರೆ. ಸೇವಾಕಾರ್ಯದ ಕುರಿತು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಮಠದಲ್ಲಿ ಎಷ್ಟು ಬಗೆಯ ಸೇವೆಗಳಿದ್ದರೂ ಈ ಸೇವೆ ಅತಿವಿಶಿಷ್ಟವಾದುದು, ನೇರವಾಗಿ ಶ್ರೀರಾಮದೇವರಿಗೇ ಅದು ನೈವೇದ್ಯವಾಗಿ ಸಲ್ಲುವುದಲ್ಲವೇ? ಎಂಬುದಾಗಿ ಶ್ರೀರಾಮ ನೈವೇದ್ಯದ ಬಗ್ಗೆ ಸಂದೇಶವನ್ನೂ ನೀಡಿರುತ್ತಾರೆ.