ಕಾಸರಗೋಡು : ತೈಕಡಪ್ಪುರಂ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆದ್ರ್ರಂ ಯೋಜನೆಯ ಗುಣಮಟ್ಟಕ್ಕೇರಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಯ ಅಂಗವಾಗಿ ಈ ತೀರ್ಮಾನ ಮಾಡಲಾಗಿದೆ. ಈ ಮೂಲಕ ನೂತನ ಬ್ಲಾಕ್ ನಿರ್ಮಾಣಕ್ಕೆ ಮಂಜೂರಾತಿ ಲಭಿಸಿದೆ. ಇದಕ್ಕಾಗಿ 1.30 ಕೋಟಿ ರೂ. ಮೀಸಲಿರಿಸಲಾಗಿದೆ. ನೀಲೇಶ್ವರ ನಗರಸಭೆಯ ಕಂತಾಗಿ 25 ಲಕ್ಷ ರೂ., ಉಳಿದ 105 ಲಕ್ಷ ರೂ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಿಂದ ಲಭಿಸಲಿದೆ.
ನೂತನ ಬ್ಲಾಕ್ ಕಟ್ಟಡದಲ್ಲಿ 2 ಅಂತಸ್ತುಗಳಿರುವುವು. 2 ಒ.ಪಿ.ಕೊಠಡಿಗಳು, ನಿಗಾ ಕೊಠಡಿಗಳು, ಡೆಂಟಲ್ ಒ.ಪಿ., ಸ್ಪೆಷ್ಯಲ್ ಒ.ಪಿ., ಒ.ಪಿ.ರೆಜಿಸ್ಟ್ರೇಷನ್ ಕೌಂಟರ್, ಡ್ರೆಸ್ಸಿಂಗ್ ರೂಂ, ಲ್ಯಾಬ್, ಬ್ರೆಸ್ಟ್ ಫೀಡಿಂಗ್ ರೂಂ, ಫಾರ್ಮಸಿ ಸಹಿತ ಎಲ್ಲ ವಿಧದ ಸೌಲಭ್ಯಗಳು ಇರವವು. ಪ್ರತ್ಯೇಕ ವೇಸ್ಟ್ ಮೆನೆಜ್ ಮೆಂಟ್ ಸೌಲಭ್ಯವೂ ಇರುವುದು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಜಿಲ್ಲಾ ಮಟ್ಟದ ಸಮಿತಿ ಸಭೆ ಈ ಮಂಜೂರಾತಿ ನೀಡಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಕಟ್ಟಡ ವಿಭಾಗ ಕಾರ್ಯಕಾರಿ ಇಂಜಿನಿಯರ್ ಮುಹಮ್ಮದ್ ಮುನೀರ್ ವಿ.ಪಿ., ಹಣಕಾಸು ಅಧಿಕಾರಿ ಕೆ.ಸತೀಶನ್ ಮೊದಲಾದವರು ಉಪಸ್ಥಿತರಿದ್ದರು.