ಉಪ್ಪಳ: ಪೈವಳಿಕೆ ಸಮೀಪದ ಬಾಯಾರಿನ ಕ್ಯಾಂಪೆÇ್ಕ ಕಡೆಯಿಂದ ಬಾಯಾರು ಸೊಸೈಟಿ ಕಡೆಗೆ ಸಾಗುವ ರಸ್ತೆ ಸುರಿಯುತ್ತಿರುವ ಭಾರೀ ಮಳೆಗೆ ಸಂಪೂರ್ಣ ಕೊಚ್ಚೊಯ್ಯಲ್ಪಟ್ಟು ಸಂಚಾರ ವ್ಯತ್ಯಯಕ್ಕೆ ಕಾರಣವಾಗಿದೆ. ರಸ್ತೆಯ ಇಕ್ಕೆಲಗಳಲ್ಲೂ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಸಂಪೂರ್ಣ ರಸ್ತೆಯಲ್ಲಿ ಹರಿದಿರುವುದರಿಂದ ಸಮಸ್ಯೆ ತಲೆದೊರಿದ್ದು ಸಂಚಾರ ಕಷ್ಟಕರವೆನಿಸಿದೆ.
ಕಳೆದ ವರ್ಷ ರಸ್ತೆಯ ಚರಂಡಿ ನಿರ್ಮಾಣ ನಡೆದಿದ್ದರೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆನೀರು ಚರಂಡಿಯಲ್ಲಿ ಹರಿಯದೆ ರಸ್ತೆಯಲ್ಲೇ ಹರಿಯುತ್ತಿದ್ದು ವಾಹನಗಳು ಸಂಚರಿಸುವಾಗ ಕೊಳಚೆ ನೀರು ರಸ್ತೆ ಬದಿಯಲ್ಲಿ ಹೋಗುವ ಪಾದಚಾರಿಗಳ ಮೈಮೇಲೆ ಬೀಳುವ ಸ್ಥಿತಿ ಇದೆ.
ಬಾಯಾರು ಪದವಿನಿಂದ ಕನಿಯಾಲ, ಸಜಂಕಿಲ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ಹಲವು ವರ್ಷಗಳಿಂದಲೂ ಈ ಭಾಗದ ರಸ್ತೆ ಹಾಗೂ ಚರಂಡಿ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸಮಸ್ಯೆಗೆ ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸುವರೇ ? ಎಂದು ಸಾರ್ವಜನಿಕರು ಅವಲತ್ತುಕೊಂಡಿದ್ದಾರೆ.
ಅಭಿಮತ:
ರಾಜ್ಯ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಇದಾಗಿದೆ. ರಸ್ತೆಯ ಒಂದಷ್ಟು ಭಾಗ ಈಗಾಗಲೇ ಕಾಂಕ್ರೀಟೀಕರಣಗೊಂಡಿದೆ. ಮಳೆ ನೀರು ಹರಿಯಲು ಚರಂಡಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಆ ಪರಿಸರದ ವ್ಯಾಪಾರಿಗಳು ಚರಂಡಿಗೆ ರಸ್ತೆಯಿಂದ ನೀರು ಹರಿಯುವಲ್ಲಿ ಮುಚ್ಚಿದ ಕಾರಣ ಚರಂಡಿಗೆ ಸಂಚರಿಸಬೇಕಾದ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತರಲಾಗಿದ್ದು ಈವಾರಾಂತ್ಯದೊಳಗೆ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಈ ಬಗ್ಗೆ ತಾನೂ ಮುತುವರ್ಜಿ ವಹಿಸಿ ಒಂದೆರಡು ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವೆನು.
-ರಹೀಂ ನಡುಮನೆ
ಸದಸ್ಯರು. ಪೈವಳಿಕೆ ಗ್ರಾಮ ಪಂಚಾಯತಿ.