ನವದೆಹಲಿ: ನ್ಯಾಯಂಗ ನಿಂದನೆ ಕಾಯ್ದೆಯ ಸಂವಿಧಾನ ಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಆರ್ಜಿಯನ್ನು ಹಿಂಪಡೆಯಲು ಸುಪ್ರೀಂ ಕೋರ್ಟ್ ಗುರುವಾರ ಸಮ್ಮತಿಸಿದೆ.
ಹಿರಿಯ ವಕೀಲ ಪ್ರಶಾಂತ್ ಭೂಷಣ್, ಮಾಜಿ ಕೇಂದ್ರ ಸಚಿವ ಅರುಣ್ ಶೌರಿ, ಹಿರಿಯ ಪತ್ರಕರ್ತ ಎನ್. ರಾಮ್ ಅವರು ಈ ಆರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಅಧಿಕಾರವನ್ನು ಪ್ರಶ್ನಿಸುವುದನ್ನು ನ್ಯಾಯಾಲಯ ನಿಂದನೆ ಎಂದು ಪರಿಗಣಿಸುವ ಕಾಯ್ದೆಯ ಸಂವಿಧಾನಿಕ ಬದ್ದತೆಯನ್ನು ಅವರು ತಮ್ಮ ಆರ್ಜಿಯಲ್ಲಿ ಪ್ರಶ್ನಿಸಿದ್ದರು.
ಪ್ರಶಾಂತ್ ಭೂಷಣ್ ಪರ ಹಿರಿಯ ವಕೀಲ ರಾಜೀವ್ ಧವನ್ , ನ್ಯಾಯಮೂರ್ತಿ ಅರುಣ್ ಮಿಶ್ರಾ ನ್ಯಾಯಪೀಠ ಮುಂದೆ ವಾದಿಸಿ, ಇದೇ ಅಂಶಗಳ ಬಗ್ಗೆ ಹಲವಾರು ಆರ್ಜಿಗಳು ವಿಚಾರಣೆಗಾಗಿ ಬಾಕಿ ಇರುವ ಕಾರಣ ತಮ್ಮ ಅರ್ಜಿಯನ್ನು ವಾಪಸ್ಸು ಪಡೆದುಕೊಳ್ಳಲಿದ್ದೇವೆ ಎಂದು ತಿಳಿಸಿದರು. ಆದರೆ, ತಾವು ಮತ್ತೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಲು, ಅವಕಾಶ ನೀಡಬೇಕು ಎಂದು ಕೋರಿದರು.
ಈ ಆರ್ಜಿಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಬಿ.ಆರ್. ಗವಾಯ್, ಕೃಷ್ಣ ಮುರಾರಿ ಅವರನ್ನು ಒಳಗೊಂಡ ನ್ಯಾಯಪೀಠ, ಅರ್ಜಿ ವಾಪಸ್ಸು ಪಡೆದುಕೊಳ್ಳಲು ಅನುಮತಿ ನೀಡಿ, ಮತ್ತೆ ನ್ಯಾಯಾಲಯ ಮೊರೆ ಹೋಗಬಹುದು ಹೇಳಿತು.
ನ್ಯಾಯಾಲಯ ನಿಂದನೆ ಕಾಯ್ದೆ, ೧೯೭೧ರ ಸೆಕ್ಷನ್ ೨(ಸಿ) (ಐ) ರಾಜ್ಯಾಂಗ ಬದ್ದತೆಯನ್ನು ಆರ್ಜಿದಾರರು ಪ್ರಶ್ನಿಸಿದ್ದರು. ಈ ನಿಬಂಧನೆ ವಾಕ್ ಸ್ವಾತಂತ್ರ್ಯ, ಸಮಾನತೆ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿದ್ದರು.