ಕುಂಬಳೆ: ಭಾಷೆಯೊಂದು ಉಳಿದು ಬೆಳೆಯಬೇಕಾದರೆ ಆ ಭಾಷೆಯ ಮೂಲ ಪದಗಳ ಬಳಕೆ ನಿರಂತರವಾಗಿ ಇರಬೇಕು. ತುಳು ಸಂಸ್ಕøತಿ ಜೀವಂತ ಸಂಸ್ಕøತಿಯಾಗಿದ್ದು ಜನಜೀವನ, ಪ್ರಕೃತಿ, ದೇಶ, ರಾಷ್ಟ್ರಗಳೊಂದಿಗೆ ಸಂಪರ್ಕಹೊಂದಿರುವ ವಿಶಿಷ್ಟತೆಯಾಗಿದೆ ಎಂದು ಖ್ಯಾತ ಯಕ್ಷಗಾನ ಕಲಾವಿದ, ಕರ್ನಾಟಕ ಬ್ಯಾರಿ ಅಕಾಡೆಮಿ ಸದಸ್ಯ ರಾಧಾಕೃಷ್ಣ ನಾವಡ ಮಧೂರು ಅವರು ತಿಳಿಸಿದರು.
ಬದಿಯಡ್ಕದ ತುಳುವರೆ ಆಯನೊ ಕೂಟದ ಆಶ್ರಯದಲ್ಲಿ ಸೀತಾಂಗೋಳಿಯಲ್ಲಿ ಶನಿವಾರ ಸಂಜೆ ಆಯೋಜಿಸಲಾದ "ಆಟಿದ ಕೂಟ" ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಸಾಂಸ್ಕøತಿಗೂ ಶ್ರೀಮಂತ ಸಮಗ್ರ ಭಾಷೆ, ಜೀವನ ಪದ್ದತಿಗಳ ಸಂಪನ್ನತೆ ಇರುತ್ತದೆ. ಅದು ಇನ್ನೊಂದರಿಂದ ಎರವಲು ಪಡೆಯುವ ಅಗತ್ಯ ಇರುವುದಿಲ್ಲ. ಆದರೆ ಇಂದು ತುಳು ಭಾಷೆ ಮೂಲ ಸೊಗಡುಗಳಿಂದ ದೂರವಾಗಿ ಅನ್ಯ ಭಾಷೆಗಳ ಆಕರ್ಷಣೆಯಿಂದ, ಅತಿ ಬಳಕೆಯಿಂದ ನಲುಗುತ್ತಿರುವುದು ಖೇದಕರ ಎಂದ ಅವರು ಭಾಷೆಯ ಸಮೃದ್ದಿಯ ಹೆಸರಲ್ಲಿ ಕಾರ್ಯಯೋಜನೆಗಳು ವೇದಿಕೆಗಳಿಗೆ ಮಾತ್ರ ಸೀಮಿತವಾಗದೆ ನೈಜಾರ್ಥದಲ್ಲಿ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳೋಣ ಎಂದು ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ವಾಂತಿಚ್ಚಾಲ್ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ, ಧಾರ್ಮಿಕ ವಾಗ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಅವರು ಮಾತನಾಡಿ ಕರ್ಕಟಕ ಮಾಸದ ಆಚರಣೆ, ನಂಬಿಕೆಗಳ ಹಿಂದೆ ನಮಗರಿವಿಲ್ಲದ ವಿಜ್ಞಾನದ ಸ್ವರೂಪಗಳು ಅಡಗಿವೆ. ಪ್ರಾಕೃತಿಕ ವಿದ್ಯಮಾನಗಳಿಗೆ ಅನುಸಾರವಾಗಿ ಬೆಳೆದುಬಂದ ತೌಳವ ಸಂಸ್ಕøತಿಯ ಪ್ರತಿಯೊಂದು ಆಚಾರ-ವಿಚಾರಗಳ ಹಿಂದೆ ಭೂಗೋಳ ಸಕರ್ಮ ವಿಜ್ಞಾನ ಅಡಗಿದೆ ಎಂದು ತಿಳಿಸಿದರು. ತುಳು ಭಾಷೆ, ಜನಾಂಗದ ವೈಜ್ಞಾನಿಕ ಹಿನ್ನೆಲೆಯ ಅಧ್ಯಯನ ಸಾಧ್ಯವಾದಲ್ಲಿ ತುಳು ಭಾಷೆಯ ಸಮಗ್ರ ಶ್ರೀಮಂತಿಕೆಯ ಹೊಳಹು ಇನ್ನಚ್ಚು ಹೆಚ್ಚಬಹುದು. ಆಚರಣೆಗಳ ಮಹತ್ವ, ಹಿನ್ನೆಲೆಗಳನ್ನು ಅರ್ಥೈಸಿದಾಗ ಮಾತ್ರ ಸಾಫಲ್ಯತೆ ಹೊಂದಲು ಸಾಧ್ಯ ಎಂದು ತಿಳಿಸಿದರು.
ತುಳುವರೆ ಆಯನೊ ಕೂಟದ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿ.ಸೋಜ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಆರಿಕ್ಕಾಡಿ ಶ್ರೀರಾಜನ್ ದೈವದ ಪಾತ್ರಿ ಆರಿಕ್ಕಾಡಿ ಐತ್ತಪ್ಪ, ಹರಿಕಥಾ ಸಂಕೀರ್ತನಕಾರ ಜಯಾನಂದಕುಮಾರ್ ಹೊಸದುರ್ಗ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ನಿವೃತ್ತ ಮುಖ್ಯೋಪಾಧ್ಯಾಯ ಮಾನ ಮಾಸ್ತರ್ ಸೀತಾಂಗೋಳಿ ಉಪಸ್ಥಿತರಿದ್ದು ಶುಭಹಾರೈಸಿದರು. ರಾಜೇಶ್ ಆಳ್ವ ಬದಿಯಡ್ಕ ಉಪಸ್ಥಿತರಿದ್ದು ಮಾತನಾಡಿದರು. ಈ ಸಂದರ್ಭ ಇತ್ತೀಚೆಗೆ ನಿಧನರಾದ ವಿಟ್ಲ ಅರಮನೆಯ ಜನಾರ್ಧನ ವರ್ಮ ಅರಸರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ನಿರಂಜನ ರೈ ಪೆರಡಾಲ ಸ್ವಾಗತಿಸಿ, ರವಿ.ನಾಯ್ಕಾಪು ವಂದಿಸಿದರು. ತುಳುವರೆ ಆಯನೊ ಕೂಟದ ಕಾರ್ಯದರ್ಶಿ ಭಾಸ್ಕರ ಕೆ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಅವರ ಪ್ರಾಯೋಜಕತ್ವದಲ್ಲಿ ಸಿದ್ದಪಡಿಸಲಾದ ಆಟಿ ವಿಶೇಷ ಖಾದ್ಯಗಳಾದ ಕೆಸು ಪತ್ರೊಡೆ, ಮಂಜಲ್ತಡ್ಯೆ ಹಾಗೂ ಎಂಡೆಮುನ್ಚಿ ಕಸಾಯೊ ವಿತರಣೆ ನಡೆಯಿತು.