ಕಾಸರಗೋಡು: ಕಾಸರಗೋಡು ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆಯುವ ಎಲ್ಲ ವಿವಾಹ, ಮರಣ ಸಂಬಂಧ ಸಮಾರಂಭಗಳು ಸ್ಥಳೀಯಾಡಳಿತಗಳ ಅನುಮತಿಯೊಂದಿಗೆ ನಡೆಯಬೇಕು ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
ತ್ರಿಸ್ತರ ಪಂಚಾಯತ್ ಪ್ರತಿನಿಧಿಗಳೊಂದಿಗೆ ಸೋಮವಾರ ಮಧ್ಯಾಹ್ನ ನಡೆಸಿದ ಆನ್ ಲೈನ್ ಸಭೆಯಲ್ಲಿ (ವೀಡಿಯೋ ಕಾನ್ ಫೆರೆನ್ಸ್) ಅವರು ಈ ವಿಚಾರ ತಿಳಿಸಿದರು.
ಜಿಲ್ಲೆಯ ಪ್ರತಿವಾರ್ಡ್ ಮಟ್ಟದಲ್ಲಿ ನಡೆಯುವ ಮದುವೆ, ಮರಣಾನಂತರ ಸಮಾರಂಭಗಳು ಇತ್ಯಾದಿ ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆ ಗಳ ಅನುಮತಿಯೊಂದಿಗಷ್ಟೇ ನಡೆಸಬಹುದಾಗಿದೆ. ಮದುವೆ ಸಮಾರಂಭದಲ್ಲಿ ಗರಿಷ್ಠ 50 ಮಂದಿ, ಇನ್ನಿತರ ಸಮಾರಂಭಗಳಲ್ಲಿ ಗರಿಷ್ಠ 20 ಮಂದಿ ಮಾತ್ರ ಭಾಗವಹಿಸಬಹುದು ಎಂದು ನುಡಿದರು.
ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಅಂಗಡಿಗಳ ಮುಚ್ಚುಗಡೆ ಸಹಿತ ಕ್ರಮಗಳನ್ನು ಕೈಗೊಳ್ಳುವ ವೇಳೆ ವ್ಯಾಪಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರವಷ್ಟೇ ಕ್ರಮ ಜಾರಿಗೊಳಿಸಬೇಕು ಎಂದು ಸಚಿವ ಆದೇಶ ನೀಡಿದರು.
ಆಹಾರ ಸಾಮಾಗ್ರಿಗಳನ್ನು ತರಲು ಕರ್ನಾಟಕಕ್ಕೆ ತೆರಳುವ ವಾಹನಗಳಿಗೆ ಅನುಮತಿ ನೀಡಲಾಗಿದೆ. ಇದಕ್ಕೆ ಆರ್.ಟಿ.ಒ. ಅವರ ಪಾಸ್ ಕಡ್ಡಾಯ. ಈ ವಾಹನಗಳಲ್ಲಿ ಯಾವೆಲ್ಲ ಅಂಗಡಿಗಳಿಗೆ ಸಾಮಾಗ್ರಿಗಳನ್ನು ವಿತರಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟ ದಾಖಲೆಗಳನ್ನು ವಾಹನದ ಸಿಬ್ಬಂದಿ ಇರಿಸಿಕೊಳ್ಳಬೇಕು. ವಾಹನದ ಚಾಲಕ, ಇನ್ನಿತರ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾನಿಟೈಸರ್ ಬಳಸಬೇಕು. ಕರ್ನಾಟಕಕ್ಕೆ ತೆರಳಿ ಮರಳುವ ವಾಹನಗಳ ಸಿಬ್ಬಂದಿ 7 ದಿನ ಕಳೆದ ನಂತರ ಆಂಟಿಜೆನ್ ಟೆಸ್ಟ್ ಗೆ ಒಳಪಡಬೇಕು. ಇಂಥಾ ವಾಹನಗಳ ಸಂಚಾರಕ್ಕೆ ಸ್ಥಳೀಯಾಡಳಿತ ಸಂಸ್ಥೆಗಳು ಅಗತ್ಯದ ವ್ಯವಸ್ಥೆ ಒದಗಿಸಬೇಕು ಎಂದು ಸಚಿವ ನುಡಿದರು.