ನವದೆಹಲಿ: ಕೊರೊನಾ ಮಹಾಮಾರಿಯ ಆರ್ಭಟದ ನಡುವೆಯೇ 74ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸಲು ಸಕಲ ಸಿದ್ಧತೆ ಮಾಡಲಾಗಿದ್ದು, ದೈಹಿಕ ಅಂತರದ ಪಾಲನೆ ಇನ್ನಿತರ ಮುಂಜಾಗ್ರತಾ ಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸತತ 7ನೇ ಬಾರಿಗೆ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ, ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಈ ನಿಟ್ಟಿನಲ್ಲಿ ಕೆಂಪುಕೋಟೆ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಬಾರಿ ಸೀಮಿತ ಸಂಖ್ಯೆಯಲ್ಲಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕೆಂಪುಕೋಟೆ ಸುತ್ತ 300ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸುಮಾರು 4,000 ಭದ್ರತಾ ಸಿಬ್ಬಂದಿ ದೈಹಿಕ ಅಂತರ ಕಾಯ್ದುಕೊಂಡು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2 ಸಾವಿರ ಸ್ನೈಪರ್ ನಿಯೋಜನೆ: ಎನ್ಎಸ್ಜಿ, ಎಸ್ಪಿಜಿ ಮತ್ತು ಐಟಿಬಿಪಿಯಂತಹ ಪಡೆಗಳು ಭದ್ರತಾ ಜವಾಬ್ದಾರಿ ನಿರ್ವಹಿಸಲಿದ್ದು, ದೆಹಲಿಯಾದ್ಯಂತ ಸುಮಾರು 45 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣಿಡಲಿದ್ದಾರೆ. ಕೆಂಪು ಕೋಟೆಯ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿನ ಎತ್ತರದ ಕಟ್ಟಡಗಳಲ್ಲಿ 2,000ಕ್ಕೂ ಹೆಚ್ಚು ಸ್ನೈಪರ್ಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಜತೆಗೆ ಕೆಂಪುಕೋಟೆಯ ಸಮೀಪವಿರುವ ರೈಲು ನಿಲ್ದಾಣ, ಹೋಟೆಲ್, ವಸತಿ ಗೃಹಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ತೀವ್ರ ಕಣ್ಣಿಟ್ಟಿದ್ದಾರೆ. ಕೆಂಪುಕೋಟೆಯನ್ನು ಸಾರ್ವಜನಿಕರ ವೀಕ್ಷಣೆಗೆ ಒಂದು ದಿನ ಮುಂಚೆಯೇ ನಿರ್ಬಂಧ ವಿಧಿಸಲಾಗಿತ್ತು.
ಮೋದಿಭಾಷಣದ ಬಗ್ಗೆ ಕುತೂಹಲ: ಪ್ರಧಾನಿ ನರೇಂದ್ರ ಮೋದಿ ಯಾವ್ಯಾವ ವಿಷಯಗಳ ಕುರಿತು ಭಾಷಣದಲ್ಲಿ ಉಲ್ಲೇಖಿಸಲಿದ್ದಾರೆ ಎಂಬ ಬಗ್ಗೆಯೂ ಕಾತರ ಹೆಚ್ಚಾಗಿದೆ. ದೇಶದ ಜನರ ಆರೋಗ್ಯದ ಮಾಹಿತಿಯನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಿಸುವ ‘ಒಂದು ದೇಶ, ಒಂದು ಆರೋಗ್ಯ ಕಾರ್ಡ್’ ಯೋಜನೆಯನ್ನು ಪ್ರಧಾನಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.