ಮಂಜೇಶ್ವರ:ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳುಗಳಿಂದ ಮುಚ್ಚಲ್ಪಟ್ಟ ಅಂತರಾಜ್ಯ ಗಡಿಗಳಲ್ಲೊಂದಾದ ತಲಪ್ಪಾಡಿಯಿಂದ ಮಂಗಳೂರಿಗೆ ಮುಕ್ತ ಸಂಚಾರ ಕಲ್ಪಿಸಬೇಕೆಂದು, ಕಾಸರಗೋಡು ಜಿಲ್ಲಾಡಳಿತದ ಧಮನಕಾರಿ ನೀತಿಗೆ ಎದುರಾಗಿ ಬಿಜೆಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ಗಡಿ ಉಲ್ಲಂಘನಾ ಪ್ರತಿಭಟನೆಯ ಮುಂದುವರಿಕೆಯ ಭಾಗವಾಗಿ ಇಂದು ಬೆಳಿಗ್ಗೆ ಭಾರೀ ಜನಸಂಖ್ಯೆಯ ಬೆಂಬಲದೊಂದಿಗೆ ಗಡಿ ಉಲ್ಲಂಘನಾ ಆಂದೋಲನ ಭಾರಿ ತೀವೃತೆಯ ಪ್ರತಿಭಟನೆಯೊಂದಿಗೆ ನಡೆಯಿತು .
ಇಂದಿನಿಂದ ಅನ್-ಲಾಕ್ 4 ಪ್ರಾರಂಭಗೊಂಡಿದೆ. ಕೇಂದ್ರ ಸರ್ಕಾರ ಈ ಮೊದಲೇ ಎಲ್ಲಾ ರಾಜ್ಯಗಳಿಗೂ ಗಡಿ ತೆರೆದು ಕೊಡುವಂತೆ ಆದೇಶವನ್ನು ಹೊರಡಿಸಿದೆ. ಮಾತ್ರವಲ್ಲದೆ ಇಂದಿನಿಂದ ಪ್ರತ್ಯೇಕವಾಗಿಯೂ ಯಾವುದೇ ಗಡಿ ಮುಚ್ಚಿರಬಾರದೆಂದೂ ನಿರ್ದೇಶವನ್ನು ನೀಡಿದ್ದರೂ ಕಾಸರಗೋಡು ಜಿಲ್ಲಾಡಳಿತ ಕೇವಲ ಕೆಲವು ಪಂಚಾಯತುಗಳ ವ್ಯಾಪ್ತಿಯಲ್ಲಿರುವವರಿಗೆ ಮಾತ್ರ ಗಡಿಯಲ್ಲಿ ಪಾಸ್ ಇಲ್ಲದೆ ಅನುಮತಿಯನ್ನು ನೀಡಿ ಮಿಕ್ಕುಳಿದ ಪ್ರದೇಶದ ಜನರಿಗೆ ದಕ್ಷಿಣ ಕನ್ನಡ ಸಂಚಾರ ಮಾಡದಂತೆ ಪೊಳ್ಳು ನೆಪಗಳೊಂದಿಗೆ ಸತಾಯಿಸುತ್ತಿರುವುದನ್ನು ಪ್ರತಿಭಟಿಸಿ ಬಿಜೆಪಿ ಇಂದು ಮತ್ತೆ ಗಡಿ ಉಲ್ಲಂಘನಾ ಪ್ರತಿಭಟನೆಯನ್ನು ನಡೆಸಿದೆ.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ಪಟ್ಲ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಆಂದೋಲನವನ್ನು ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿದರು. ಗಡಿ ಉಲ್ಲಂಘನೆಯನ್ನು ನಡೆಸಲು ಯತ್ನಿಸಿದ ಬಿಜೆಪಿ ನೇತಾರರನ್ನು ಹಾಗೂ ಕಾರ್ಯಕರ್ತರನ್ನು ಪೆÇಲೀಸರು ಗಡಿಯಲ್ಲಿ ತಡೆದರು. ಬಳಿಕ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲೇ ಕುಳಿತು ಧರಣಿ ನಡೆಸಿದರು.
ಪ್ರತಿಭಟನಾ ಆಂದೋಲನವನ್ನು ಉದ್ಘಾಟಿಸಿದ ಕೆ.ಶ್ರೀಕಾಂತ್ ಮಾತನಾಡಿ, ಕೇರಳದಲ್ಲಿ ಯುಡಿಎಫ್ ಹಾಗೂ ಎಲ್ ಡಿ ಎಫ್ ಜನರನ್ನು ವಂಚಿಸಿ ಹಣವನ್ನು ದೋಚುವುದರಲ್ಲಿ ತಲ್ಲೀನವಾಗಿದೆ. ಗಡಿ ಸಮಸ್ಯೆಯ ಬಗ್ಗೆ ಅವುಗಳು ದಿವ್ಯ ಮೌನ ವಹಿಸಿವೆ. ಇವತ್ತಿನಿಂದ ಗಡಿಯಲ್ಲಿ ಯಾವುದೇ ನಿಯಂತ್ರಣವನ್ನು ಮಾಡಬಾರದು. ಇದನ್ನು ಜಿಲ್ಲಾಡಳಿತ ಮುಂದುವರಿಸಿದರೆ ಪ್ರತಿಭಟನೆಯ ತೀವೃತೆಯನ್ನು ಹೆಚ್ಚಿಸಲಿರುವುದಾಗಿ ಎಚ್ಚರಿಕೆ ನೀಡಿದರು.
ನೇತಾರರಾದ ನವೀನ್ ರಾಜ್ ಕೆ.ಕೆ. , ಪದ್ಮನಾಭ ಕಡಪ್ಪುರ, ಯಾದವ್ ಬಡಾಜೆ, ಗೋಪಾಲ ಶೆಟ್ಟಿ ಅರಿಬೈಲು, ವಿಜಯ ರೈ ಸಹಿತ ಹಲವು ನೇತಾರರು ನೇತೃತ್ವ ನೀಡಿದರು.