ತೈಲೋತ್ಪನ್ನಗಳ ದರಗಳು ಇಳಿಕೆ ಕಂಡಿದ್ದು, ಡೀಸೆಲ್ ದರದಲ್ಲಿ ಇಂದು 13 ಪೈಸೆ ಇಳಿಕೆಯಾಗಿದೆ.
ದೇಶದ ಅತೀ ದೊಡ್ಡ ತೈಲೋತ್ಪನ್ನ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ನೀಡಿರುವ ಮಾಹಿತಿಯಂತೆ ಡೀಸೆಲ್ ದರದಲ್ಲಿ ಇಂದು 13 ಪೈಸೆ ಇಳಿಕೆ ಕಂಡುಬಂದಿದ್ದು, ಪೆಟ್ರೋಲ್ ದರದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡುಬಂದಿಲ್ಲ. ಪೆಟ್ರೋಲ್ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಡೀಸೆಲ್ ದರ 73.27ರೂಗೆ ಕುಸಿದಿದ್ದು, ಪೆಟ್ರೋಲ್ ದರ ಪ್ರತೀ ಲೀಟರ್ ಗೆ 82.08ರೂಗಳಷ್ಟಿದೆ. ಇನ್ನು ವಾಣಿಜಯ ನಗರಿ ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 88.73ರಷ್ಟಿದ್ದು, ಡೀಸೆಲ್ ದರ 79.81ರೂ ಗೆ ಕುಸಿದಿದೆ. ಕೋಲ್ಕತಾದಲ್ಲಿ ಪೆಟ್ರೋಲ್ ದರ 83.57ರೂಗಳಿದ್ದು, ಡೀಸೆಲ್ ದರ 76.77ರೂ ಗೆ ಕುಸಿದಿದೆ.
ಚೆನ್ನೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 85.04 ರೂಗಳಿದ್ದು, ಡೀಸೆಲ್ ದರ 78.58 ರೂಗೆ ಕುಸಿದಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಡೀಸೆಲ್ ದರ 77.58ಗೆ ಕುಸಿದಿದೆ. ಪೆಟ್ರೋಲ್ ದರ ಯಥಾಸ್ಥಿತಿಯಲ್ಲಿ ಮುಂದುವರೆದಿದೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರ ಕುಸಿತಕಂಡ ಪರಿಣಾಮ ಮತ್ತು ಕೊರೋನಾ ಸಾಂಕ್ರಾಮಿಕ ಹಿನ್ನಲೆಯಲ್ಲಿ ತೈಲಗಳ ಬೇಡಿಕೆ ಕುಸಿತ ಕಂಡ ಪರಿಣಾಮ ಇಂದು ದೇಶದಲ್ಲಿ ತೈಲ ದರದಲ್ಲಿ ಇಳಿಕೆ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ ಕಚ್ಛಾ ತೈಲ ದರದಲ್ಲಿ ಶೇ.3.20ರಷ್ಷು ಕುಸಿತಕಂಡಿದ್ದು, ಪ್ರತೀ ಬ್ಯಾರೆಲ್ ಕಚ್ಛಾ ತೈಲ 42.66 ಡಾಲರ್ ಗೆ ಮಾರಾಟವಾಗುತ್ತಿದೆ. ಜೂನ್ ತಿಂಗಳಿನಿಂದೀಚಿಗೆ ಇದೇ ಮೊದಲ ಬಾರಿಗೆ ತೈಲ ದರದಲ್ಲಿ ಇಷ್ಟು ದೊಡ್ಡ ಪ್ರಮಾಣದ ಕಡಿತ ಕಂಡುಬಂದಿದೆ.
ತೈಲದರ ಕಡಿತಕ್ಕೆ ಜಾಗತಿಕ ನಿಧಾನಗತಿಯ ಆರ್ಥಿಕತೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ಆರು ತಿಂಗಳ ಬಳಿಕ ಸೆ.3ರಂದು ಡೀಸೆಲ್ ದರ ಇಳಿಕೆ ಆಗಿತ್ತು.