ನವದೆಹಲಿ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮೇ 7 ರಂದು ಆರಂಭಿಸಲಾದ ವಂದೇ ಭಾರತ್ ಅಭಿಯಾನ ಆರಂಭಿಸಿದ ನಂತರ ಸುಮಾರು 13.74 ಲಕ್ಷ ಭಾರತೀಯರು ಸ್ವದೇಶಕ್ಕೆ ವಾಪಸ್ ಆಗಿದ್ದಾರೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ಗುರುವಾರ ತಿಳಿಸಿದೆ.
ಸೆಪ್ಟೆಂಬರ್ 1ರಿಂದ ಆರನೇ ಹಂತದ ವಂದೇ ಭಾರತ್ ಅಭಿಯಾನ ಕಾರ್ಯರೂಪಕ್ಕೆ ಬಂದಿದ್ದು, ಈ ತಿಂಗಳಲ್ಲಿ 1,007 ಅಂತಾರಾಷ್ಟ್ರೀಯ ವಿಮಾನಗಳು
ಕಾರ್ಯಾಚರಣೆ ನಡೆಸಲು ನಿರ್ಧರಿಸಿವೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
2 ಲಕ್ಷಕ್ಕೂ ಹೆಚ್ಚು ಜನರನ್ನು ವಾಪಸ್ ಕರೆತರಲು ನಾವು ನಿರೀಕ್ಷಿಸಿದ್ದೇವೆ .ಸೆಪ್ಟೆಂಬರ್ 10ರ ವೇಳೆಗೆ 13.74 ಲಕ್ಷ ಭಾರತೀಯರು ಏರ್ ಇಂಡಿಯಾ, ಖಾಸಗಿ ಮತ್ತು ವಿದೇಶಿ ವಿಮಾನಗಳು, ಚಾರ್ಟೆಡ್ ವಿಮಾನಗಳು, ನೌಕ ಹಡಗುಗಳು ಮತ್ತು ರಸ್ತೆ ಮೂಲಕ ಭಾರತಕ್ಕೆ ವಾಪಸ್ ಆಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜೋರ್ಡನ್, ಅಪ್ಘಾನಿಸ್ತಾನ, ಮಾಲ್ಡೀವ್ಸ್, ಚೀನಾ, ಥೈಲ್ಯಾಂಡ್, ಅಮೆರಿಕಾ,ಇಂಗ್ಲೆಂಡ್, ಕೆನಡಾ, ಫ್ರಾನ್ಸ್, ಜರ್ಮನಿ, ಸಿಂಗಾಪುರ , ಮಲೇಷಿಯಾ, ಫಿಲೈಫೈನ್ಸ್ ಮತ್ತು ಆಸ್ಟ್ರೇಲಿಯ, ಜಿಸಿಜಿ ದೇಶಗಳಿಂದ ಈಗಾಗಲೇ 270 ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.
ಅಭಿಯಾನದಡಿ ಸ್ವದೇಶಕ್ಕೆ ಬರುವವರ ಬೇಡಿಕೆಯನ್ನು ಮೇಲ್ವಿಚಾರಣೆಯೊಂದಿಗೆ ಮುಂದುವರೆಸಲಾಗುವುದು, ಇದಕ್ಕೆ ಏರ್ ಲೈನ್ಸ್ ಗೆ ಅಗತ್ಯ ನೆರವಿನ ಭರವಸೆಯೊಂದಿಗೆ ಅದರ ಜೊತೆಯಲ್ಲಿ ಕೆಲಸ ಮಾಡುವುದಾಗಿ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.