ವಾಷಿಂಗ್ಟನ್ಸೆ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಉಡ್ಡಯನ ಮಾಡಲಿರುವ ಅಮೇರಿಕಾದ ಎನ್ಜಿ–14 ಸಿಗ್ನಸ್ ಎಂಬ ಗಗನನೌಕೆಯೊಂದಕ್ಕೆ ಭಾರತ ಮೂಲದ ಅಮೇರಿಕನ್ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರಿಡಲಾಗಿದೆ ಎಂದು ವರದಿ ತಿಳಿಸಿದೆ.
ಗಗನನೌಕೆಯೊಂದಕ್ಕೆ ಕಲ್ಪನಾ ಚಾವ್ಲಾ ಹೆಸರು ಇಡುವ ಮೂಲಕ ಅಮೇರಿಕಾದ ಪ್ರತಿಷ್ಠಿತ, ಬಾಹ್ಯಾಕಾಶ ಮತ್ತು ರಕ್ಷಣಾ ತಂತ್ರಜ್ಞಾನ ಕಂಪನಿ ನಾರ್ಥ್ರಾಪ್ ಗ್ರುಮ್ಯಾನ್, ಬಾಹ್ಯಾಕಾಶ ಯಾನ ಕೈಗೊಂಡ ಮೊದಲ ಭಾರತ ಮೂಲದ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರವಾದ ಕಲ್ಪನಾ ಚಾವ್ಲಾಗೆ ಗೌರವ ನೀಡಿದೆ.
ಬಾಹ್ಯಾಕಾಶ ಅನ್ವೇಷಣೆ, ಸಂಶೋಧನೆಗೆ ಬೇಕಾದ ಒಟ್ಟು 3,629 ಕೆ.ಜಿ ತೂಕದ ಸಾಮಗ್ರಿಗಳನ್ನು ಹೊತ್ಯೊಯಲಿರುವ ಈ ಗಗನನೌಕೆಯು ಸೆಪ್ಟೆಂಬರ್ 29ರಂದು ವರ್ಜಿನಿಯಾದಲ್ಲಿ ನಾಸಾಕ್ಕೆ ಸೇರಿದ ವಾಲಪ್ಸ್ ಫ್ಲೈಟ್ ಫೆಸಿಲಿಟಿಯಿಂದ ಉಡ್ಡಯನ ಆಗಲಿದ್ದು ಎರಡು ದಿನಗಳ ಬಳಿಕ ನೌಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಸೇರಲಿದೆ.
ನಾಸಾ ಉಡ್ಡಯನ ಮಾಡಿದ್ದ ಕೊಲಂಬಿಯಾ ಗಗನನೌಕೆಯ ತಜ್ಞರ ತಂಡದ ಸದಸ್ಯೆಯಾಗಿದ್ದ ಕಲ್ಪನಾ ಚಾವ್ಲಾ, 2003ರಲ್ಲಿ ಈ ಗಗನನೌಕೆ ಭೂಮಿಗೆ ಮರಳುವಾಗ ವಿಫಲಗೊಂಡು ಸಾವನ್ನಪ್ಪಿದ್ದಾರೆ. ಈ ಸಂದರ್ಭ ಚಾವ್ಲಾ ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ.