ತಿರುವನಂತಪುರ: ರಾಜ್ಯಾದ್ಯಂತ ಇಂದು ವ್ಯಾಪಕ ಪ್ರಮಾಣದ ಕೋವಿಡ್ ಕುಸಿತ ಕಂಡುಬಂದಿದ್ದು ಇದು ಸೋಂಕಿನ ಮುಕ್ತತೆಯ ಸಂಕೇತವಲ್ಲ ಎಂದು ಆರೋಗ್ಯ ವಿಶ್ಲೇಷಕರು ತಿಳಿಸಿದ್ದಾರೆ. ಪ್ರಸ್ತುತ ತಿಳಿದುಬಂದಿರುವ ಮಾಹಿತಿಯಂತೆ ಭಾನುವಾರ ಕೋವಿಡ್ ಪರೀಕ್ಷೆಗಳು ನಿತ್ಯದಂತೆ ನಡೆಸಲಾಗುವುದಿಲ್ಲ. ಸಾಮಾನ್ಯವಾಗಿ ದಿನನಿತ್ಯ 40 ರಿಂದ 45 ಸಾವಿರದಷ್ಟು ಜೊಲ್ಲಿನ ಮಾದರಿ ಪರೀಕ್ಷೆಗಳ ಪೈಕಿ ನಿನ್ನೆ 20 ಸಾವಿರದಷ್ಟು ಮಾತ್ರ ಪರಿಶೋಧನೆ ಮಾಡಿದ್ದರಿಂದ ಇಂದಿನ ಕೋವಿಡ್ ಅಂಕಿಅಂಶಗಳಲ್ಲಿ ಕುಸಿತ ಕಂಡುಬಂದಿದೆ ಎಂದು ತಿಳಿದುಬಂದಿದೆ.
ಇಂದು ರಾಜ್ಯದಲ್ಲಿ 1648 ಜನರಿಗೆ ಕೋವಿಡ್ -19 ದೃಢಪಡಿಸಲಾಗಿದೆ. ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2246 ಜನರ ಪರೀಕ್ಷಾ ಫಲಿತಾಂಶಗಳು ಸಹ ನಕಾರಾತ್ಮಕವಾಗಿವೆ. ಇಂದು 12 ಸಾವುಗಳು ದೃಢಪಟ್ಟಿದೆ. ಇಂದು, ರೋಗ ಪತ್ತೆಯಾದವರಲ್ಲಿ 29 ಮಂದಿ ವಿದೇಶಗಳಿಂದ ಮತ್ತು 54 ಇತರ ರಾಜ್ಯಗಳಿಂದ ಬಂದವರು. ಸಂಪರ್ಕದ ಮೂಲಕ 1495 ಜನರಿಗೆ ಸೋಂಕು ತಗುಲಿದೆ. ಅವುಗಳಲ್ಲಿ 112 ರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ.
ಜಿಲ್ಲಾವಾರು ವಿವರ:
ಕಣ್ಣೂರು 260 , ತಿರುವನಂತಪುರ 253 , ಮಲಪ್ಪುರಂ 187 , ಕೊಟ್ಟಾಯಂ 154 , ಕಾಸರಗೋಡು 134 , ಎರ್ನಾಕುಳಂ 130 , ತ್ರಿಶೂರ್ 128 , ಪಾಲಕ್ಕಾಡ್ 118 ಕೋಝಿಕ್ಕೋಡ್ 103, ಆಲಪ್ಪುಳ 78, ಕೊಲ್ಲಂ 71 , ಪತ್ತನಂತಿಟ್ಟು 24 ಮತ್ತು ಇಡುಕ್ಕಿ ಮತ್ತು ವಯನಾಡ್ ಜಿಲ್ಲೆಗಳ 4 ಜನರಿಗೆ ಇಂದು ರೋಗ ಪತ್ತೆಯಾಗಿದೆ.
ಸಂಪರ್ಕದಿಂದ ಸೋಂಕಾದವರ ಮಾಹಿತಿ:
ಸಂಪರ್ಕದ ಮೂಲಕ 1495 ಜನರಿಗೆ ಸೋಂಕು ತಗುಲಿತು. ಅವುಗಳಲ್ಲಿ 112 ರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕಣ್ಣೂರು ಜಿಲ್ಲೆಯಿಂದ 213, ತಿರುವನಂತಪುರ ಜಿಲ್ಲೆಯಿಂದ 237, ಮಲಪ್ಪುರಂ ಜಿಲ್ಲೆಯಿಂದ 183, ಕೊಟ್ಟಾಯಂ ಜಿಲ್ಲೆಯಿಂದ 149, ತ್ರಿಶೂರ್ ಜಿಲ್ಲೆಯಿಂದ 120, ಎರ್ನಾಕುಳಂ ಜಿಲ್ಲೆಯಿಂದ 114, ಪಾಲಕ್ಕಾಡ್ ಜಿಲ್ಲೆಯಿಂದ 108, ಕಾಸರಗೋಡು ಜಿಲ್ಲೆಯಿಂದ 103 ಮತ್ತು ಕೋಝಿಕ್ಕೋಡ್ ಜಿಲ್ಲೆಯಿಂದ 98, ಆಲಪ್ಪುಳ ಜಿಲ್ಲೆಯ 77 , ಕೊಲ್ಲಂ ಜಿಲ್ಲೆಯ 67 , ಪತ್ತನಂತಿಟ್ಟು ಜಿಲ್ಲೆಯ 21 , ಇಡುಕಿ ಜಿಲ್ಲೆಯ 3 ಮತ್ತು ವಯನಾಡ್ ಜಿಲ್ಲೆಯ 2 ಮಂದಿಗಳಿಗೆ ಸಂಪರ್ಕದ ಮೂಲಕ ಕೋವಿಡ್ ಬಾಧಿಸಿದೆ.
ಇಂದು 12 ಸಾವುಗಳು:
ಇಂದು, ಕೋವಿಡ್ -19 ಕಾರಣದಿಂದಾಗಿ 12 ಸಾವುಗಳು ದೃಢಪಟ್ಟಿದೆ. ತಿರುವನಂತಪುರ ಪಾರಶಾಲದ ದೇವರಾಜ್ (65), ಎರ್ನಾಕುಳಂನ ಪಳ್ಳಿಪುರಂನ ಅಗಸ್ಟೀನ್ (78), ತಿರುವನಂತಪುರದ ಪೆರಿಂಗಮಲದ ದಮಯಂತಿ (54), ತಿರುವನಂತಪುರ ಕಾಟ್ಟಾಕಡದ ಖಾಲಿದ್ (48), ಮತ್ತು ಕರಿಕ್ಕುಳಂನ ಹರೀಂದ್ರಬಾಬು (63), ಮಣಕ್ಕಾಡ್ ನಿವಾಸಿ ಶಾಂತಕುಮಾರಿ( 68), ಮಣಕ್ಕಾಡ್ ನ ಸತಿಬೀಬಿ(68)ಪರಿಂಗಮಲದ ಬೀವಿ(41), ಬೇಬಿಪೋಲ್(73) ಕೋಝಿಕ್ಕೋಡ್ ನ ಮೋಹನನ್ ಉಣ್ಣಿ ನಾಯರ್(54), ಕಲ್ಲಾಯಿಯ ಅಬ್ದುಲ್ ರಹಮಾನ್(65), ಉಣ್ಣಿಕ್ಕುಳದ ಯೂಸುಫ್(68) ಎಂಬವರು ಕೋವಿಡ್ ಕಾರಣ ಮೃತಪಟ್ಟಿರುವುದು ದೃಢಪಡಿಸಲಾಗಿದೆ. ಒಟ್ಟು ಸಾವಿನ ಸಂಖ್ಯೆ 359 ಕ್ಕೆ ಏರಿದೆ.
ಮುಖ್ಯಮಂತ್ರಿ ಮತ್ತು ಸಚಿವರು ಸ್ವಯಂ ಕ್ವಾರಂಟೈನ್ ಗೆ :
ಹಣಕಾಸು ಸಚಿವ ಥಾಮಸ್ ಐಸಾಕ್ ಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರೊಂದಿಗೆ ಸಂಪರ್ಕಕ್ಕೆ ಬಂದ ಇತರರಿಗೆ ಕೋವಿಡ್ ಕ್ವಾರಂಟೈನ್ ಗೆ ಸೂಚಿಸಲಾಗಿದೆ. ಪಿಣರಾಯಿ ವಿಜಯನ್, ಆರೋಗ್ಯ ಸಚಿವ ಕೆ.ಕೆ.ಶೈಲಜಾ, ಕೈಗಾರಿಕಾ ಸಚಿವ ಇ.ಪಿ.ಜಯರಾಜನ್, ಕಾರ್ಮಿಕ ಸಚಿವ ಟಿ.ಪಿ.ರಾಮಕೃಷ್ಣನ್ ಮತ್ತು ವಿದ್ಯುತ್ ಸಚಿವ ಎಂ.ಎಂ.ಮಣಿ ಕ್ವಾರಂಟೈನ್ ಗೆ ಒಳಗಾಗಿರುವರು. ಪಿಣರಾಯಿ ವಿಜಯನ್ ಎರಡನೇ ಬಾರಿ ಕ್ವಾರಂಟೈನ್ ಗೆ ಒಳಗಾಗುತ್ತಿರುವುದಾಗಿದೆ. ಈ ಹಿಂದೆ ಮಲಪ್ಪುರಂ ಜಿಲ್ಲಾಧಿಕಾರಿಗಳಿಗೆ ಕೋವಿದ್ ದೃಢಪಟ್ಟಾಗ ಮುಖ್ಯಮಂತ್ರಿ ಕ್ವಾರಂಟೈನ್ ಗೆ ತೆರಳಿದ್ದರು.
ರಷ್ಯಾದ ಕೋವಿಡ್ ಲಸಿಕೆ ಪರೀಕ್ಷಿಸಲು ಭಾರತ:
ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಅಂಕಿ ಅಂಶಗಳ ಮಧ್ಯೆ ರಷ್ಯಾದ ಸರ್ಕಾರಿ ಸಂಸ್ಥೆ ಅಭಿವೃದ್ಧಿಪಡಿಸಿದ 'ಸ್ಪುಟ್ನಿಕ್ 5' ಲಸಿಕೆಯನ್ನು ಭಾರತ ಪರೀಕ್ಷಿಸುವ ಸಾಧ್ಯತೆಯಿದೆ. ಸರ್ಕಾರದ ವರದಿ ಉಲ್ಲೇಖಿಸಿ ಈ ಮಾಹಿತಿ ಲಭ್ಯವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಲಸಿಕೆ ಅಭಿವೃದ್ಧಿ, ಪರೀಕ್ಷೆ ಮತ್ತು ಉತ್ಪಾದನೆಗಾಗಿ ಎರಡು ಸರ್ಕಾರಗಳ ನಡುವೆ ಚರ್ಚೆಗಳು ನಡೆಯುತ್ತಿವೆ. ರಷ್ಯಾ ಸರ್ಕಾರದಿಂದ ನಿಯಂತ್ರಿಸಲ್ಪಡುವ ಗಮಲೇಯ ಇನ್ಸ್ಟಿಟ್ಯೂಟ್ ಲಸಿಕೆ ಸಂಶೋಧನೆಯ ಮಾಹಿತಿಯನ್ನು ಭಾರತಕ್ಕೆ ರವಾನಿಸಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಈ ಮಾಹಿತಿಯನ್ನು ಬಳಸಿಕೊಂಡು ಭಾರತದಲ್ಲಿ ಮೂರನೇ ಹಂತದ ಲಸಿಕೆಯನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಸಾಧ್ಯವಾಗಲಿದೆ.