ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಅಬ್ಬರದ ನಡುವೆಯೇ ಸಂಸತ್ತಿನಲ್ಲಿ ಉಭಯ ಸದನಗಳ ಮುಂಗಾರು ಅಧಿವಶನ ಸೋಮವಾರದಿಂದ ಆರಂಭವಾಗಲಿದೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಕಲಾಪವನ್ನು ನಡೆಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಎರಡೂ ಸದನಗಳನ್ನು ಬಳಸಿಕೊಂಡು ಒಂದು ಸದನದ ಕಲಾಪ ನಡೆಸುವುದು, ಸಾಮಾಜಿಕ ಅಂತರಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು, ಎರಡು ಪಾಳಿಗಳಲ್ಲಿ ಕಲಾಪ ನಡೆಸುವುದು ಸೇರಿದಂತೆ ಹಲವು ವಿಭಿನ್ನತೆಗಳಿಗೆ ಈ ಬಾರಿಯ ಅಧಿವೇಶನ ಸಾಕ್ಷಿಯಾಗಲಿದ್ದು, ಐತಿಹಾಸಿಕ ಎನಿಸಿದೆ.
ಚೀನಾ ವಿರುದ್ಧದ ಗಡಿ ಸಂಘರ್ಷ, ಕೊರೋನಾ ನಿರ್ವಹಣೆ, ಆರ್ಥಿಕತೆ ಕುಸಿತ, ಜಿಎಸ್'ಟಿ ನಷ್ಟ ಪರಿಹಾರ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳಲು ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಸಜ್ಜಾಗಿವೆ.
ಇದಕ್ಕೆ ತಕ್ಕ ತಿರುಗೇಟು ಕೊಡಲು ಆಡಳಿತಾರೂಢ ಬಿಜೆಪಿ ಕೂಡ ಸಜ್ಜಾಗಿದ್ದು, ವಿಭಿನ್ನ ಕಲಾಪದಲ್ಲೂ ಭರ್ಜರಿ ವಾಕ್ಸಮರವನ್ನು ನಿರೀಕ್ಷಿಸಲಾಗುತ್ತಿದೆ. ಸರ್ಕಾರ 45 ಮಸೂದೆಗಳನ್ನು ಮಂಡಿಸಲು ಉದ್ದೇಶಿಸಿದ್ದು, ಆ ಪೈಕಿ ಕೆಲವನ್ನು ಅತ್ಯುಗ್ರವಾಗಿ ವಿರೋಧಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.
ಈ ಬಾರಿಯ ಅಧಿವೇಶನದಲ್ಲಿ ಒಂದು ಕಲಾಪದಿಂದ ಮತ್ತೊಂದಕ್ಕೆ 6 ತಿಂಗಳಿಗಿಂತ ಅಧಿಕ ಅಂತರವಿರಬಾರದು ಎಂಬ ನಿಯಮವಿದೆ. ಆದ ಕಾರಣ ಕೊರೋನಾ ನಡುವೆಯೇ ಮುಂಗಾರು ಅಧಿವೇಶನವನ್ನು ಆಯೋಜನೆ ಮಾಡಲಾಗಿದೆ. ಸೋಮವಾರದಿಂದ ಅ.1ರ ವರೆಗೆ ಕಲಾಪ ನಡೆಯಲಿದೆ. ಸಾಮಾನ್ಯವಾಗಿ ಶನಿವಾರ ಅದರಲ್ಲೂ ವಿಶೇಷವಾಗಿ ಭಾನುವಾರ ಕಲಾಪ ನಡೆಯುವುದಿಲ್ಲ. ಆದರೆ ಈ ಬಾರಿ ವಾರಾಂತ್ಯ, ಸರ್ಕಾರಿ ರಜೆ ಯಾವುದನ್ನೂ ಪರಿಗಣಿಸದೆ ಸತತ 18 ದಿನ ಕಲಾಪ ನಡೆಸಲು ಉದ್ದೇಶಿಸಲಾಗಿದೆ. ಕೊರೋನಾ ಹಿನ್ನೆಲೆ ಕಲಾಪಕ್ಕೆ ಹಾಜರಾಗುವ ಸಂಸದರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಸಾಮಾಜಿಕ ಅಂತರ ಗಮನದಲ್ಲಿಟ್ಟುಕೊಂಡು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಸದಸ್ಯರ ನಡುವೆ ಪಾಲಿಕಾರ್ಬನ್ ಶೀಟ್ ಗಳನ್ನು ಅಳವಡಿಸಲಾಗಿದೆ.
ಬೆಳಿಗ್ಗೆ ರಾಜ್ಯಸಭೆ ಹಾಗೂ ಸಂಜೆ ಲೋಕಸಭೆ ಕಲಾಪಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನ ಮಾತ್ರ ಬೆಳಿಗ್ಗೆ 9ರಿಂದ 1ರವರೆಗೆ ಲೋಕಸಭೆ, ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ರಾಜ್ಯಸಭೆ ಕಲಾಪ ನಡೆಯಲಿದೆ. ಮರುದಿನದಿಂದ ಬೆಳಿಗ್ಗೆ ರಾಜ್ಯಸಭೆ ಹಾಗೂ ಸಂಜೆ ಲೋಕಸಭೆ ಕಲಾಪ ನಿಗದಿಯಾಗಿದೆ.
ಲೋಕಸಭೆಯಲ್ಲಿ 257, ವೀಕ್ಷಕರ ಗ್ಯಾಲರಿಯಲ್ಲಿ 172, ರಾಜ್ಯಸಭೆಯಲ್ಲಿ 60, ವೀಕ್ಷಕರ ಗ್ಯಾಲರಿಯಲ್ಲಿ 51 ಸಂಸದರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಶೂನ್ಯವೇಳೆಯಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಮಂಡನೆಗೆ ಅವಕಾಶ ನೀಡಲಾಗಿದೆ. ಕೆಲವು ಹಿರಿಯ ಸದಸ್ಯರಿಗೆ ಚೇಂಬರ್ ವ್ಯವಸ್ಥೆ ಮಾಡಿ ಆಸನ ಸೌಕರ್ಯ ಕಲ್ಪಿಸಲಾಗಿದೆ.