ಹೈದರಾಬಾದ್: ಕೋವಿಡ್-19 ರೋಗ ಲಕ್ಷಣಗಳಿಗೂ ಟಾನ್ಸಿಲ್ಸ್ ಸೋಂಕಿಗೂ ಸಾಮ್ಯತೆಗಳಿದ್ದು ಗೊಂದಲಕ್ಕೀಡಾಗುವ ಸಾಧ್ಯತೆಗಳು ಹೆಚ್ಚಿವೆ.
ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು ಪೋಷಕರಲ್ಲಿ ಆತಂಕ ಮೂಡಿಸಿದೆ. ಮಳೆಗಾಲ, ಚಳಿಗಾಲಗಳಲ್ಲಿ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಟಾನ್ಸಿಲ್ಸ್ ನ್ನು ಪೋಷಕರು ಕೋವಿಡ್-19 ರೋಗಲಕ್ಷಣಗಳೆಂದು ಗೊಂದಲಕ್ಕೀಡಾಗುವ ಸಾಧ್ಯತೆ ಇದೆ.
ಗಂಟಲು ಕೆರತ, ಧ್ವನಿಯಲ್ಲಿ ಬದಲಾವಣೆಯಾಗುವುದು, ಉಸಿರಾಟದ ಸಮಸ್ಯೆ, ಜ್ವರ, ತಲೆನೋವು ಇವೆಲ್ಲವೂ ಟಾನ್ಸಿಲ್ಸ್ ನ ಸಾಮಾನ್ಯ ಲಕ್ಷಣಗಳಾಗಿವೆ. ಈ ಲಕ್ಷಣಗಳು ಎಷ್ಟು ದಿನಗಳವರೆಗೆ ಇರಲಿದೆ ಎಂಬುದನ್ನು ಆಧರಿಸಿ ಮುಂದಿನ ವೈದ್ಯಕೀಯ ಸಲಹೆಯನ್ನು ಪಡೆಯುವುದು ಒಳಿತು ಎನ್ನುತ್ತಾರೆ ಹೈದರಾಬಾದ್ ನ ಇಎನ್ ಟಿ ಶಸ್ತ್ರಚಿಕಿತ್ಸಕ ಡಾ. ಸಯೀದ್ ಅಬ್ದುಲ್ ಹಕೀಮ್.
"ಮೇಲೆ ಹೇಳಿರುವ ರೋಗ ಲಕ್ಷಣಗಳು ಜ್ವರ ಹಾಗೂ ನೋವು ಸಹಿತ 2-3 ದಿನಗಳಿಗಿಂತ ಹೆಚ್ಚು ಇದ್ದಲ್ಲಿ, ವೈದ್ಯರನ್ನು ಸಂಪರ್ಕಿಸುವುದು ಒಳಿತು.
ಲಕ್ಷಣಗಳ ತೀವ್ರತೆ ಹಾಗೂ ಟಾನ್ಸಿಲ್ಸ್ ನ ಹಿಸ್ಟರಿಯನ್ನು ಗಮನಿಸಿ ವೈದ್ಯರು ಸಲಹೆ ನೀಡಲಿದ್ದಾರೆ. ಸಣ್ಣ ಪ್ರಮಾಣದಲ್ಲಿದ್ದು ತೀವ್ರವಾಗುತ್ತಿದ್ದರೆ ಸೋಂಕು ತಗುಲಿರುವ ಟಾನ್ಸಿಲ್ಸ್ ನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕುವ ಟಾನ್ಸಿಲೆಕ್ಟಮಿ ಎಂಬ ಚಿಕಿತ್ಸಾ ವಿಧಾನವನ್ನು ಹೇಳಲಿದ್ದಾರೆ ಎನ್ನುತ್ತಾರೆ ವೈದ್ಯ ಹಕೀಮ್.
ಮಕ್ಕಳು ಬಾಹ್ಯ ವಾತಾವರಣದಲ್ಲಿ ಹೆಚ್ಚು ಆಟವಾಡುವುದರಿಂದ ಹಲವು ವಿಧಗಳ ವೈರಸ್ ಹಾಗೂ ಬ್ಯಾಕ್ಟೀರಿಯಾಗಳಿಗೆ ತೆರೆದುಕೊಳ್ಳುತ್ತಾರೆ. ಈ ರೀತಿಯ ವೈರಸ್, ಬ್ಯಾಕ್ಟೀರಿಯಾಗಳಿಗೆ ಮೊದಲು ಸಿಲುಕಿಕೊಳ್ಳುವುದೇ ಟಾನ್ಸಿಲ್ಸ್. ಟಾನ್ಸಿಲ್ಸ್ ಗಳನ್ನು ಸೋಂಕಿನಿಂದ ದೂರವಿಡುವುದಕ್ಕೆ ಸಾಕಷ್ಟು ನೀರು ಕುಡಿಯಿರಿ, ಗಾರ್ಗಲ್ ಮಾಡಬೇಕು. ಕಲುಶಿತ ವಾತಾವರಣದಿಂದ ದೂರವಿರಿ ಎಂದು ವೈದ್ಯರು ಹೇಳಿದ್ದಾರೆ.