ನವದೆಹಲಿ: ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ದೃಢೀಕರಣ, ಅಧಿಕಾರ ನೀಡುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
ಸೆ.13 ರಂದು ಸಂಡೇ ಸಂವಾದ್ ಕಾರ್ಯಕ್ರಮದ ಮೂಲಕ ಸಾಮಾಜಿಕ ಜಾಲತಾಣದ ಅನುಯಾಯಿಗಳೊಂದಿಗೆ ಸಂವಾದ ನಡೆಸಿದ ವೇಳೆಯಲ್ಲಿ ಹರ್ಷವರ್ಧನ್ ಈ ಘೋಷಣೆ ಮಾಡಿದ್ದಾರೆ.
ಕೋವಿಡ್-19 ಗೆ ಸಂಬಂಧಪಟ್ಟಂತೆ ಅತಿ ಹೆಚ್ಚು ಅಪಾಯಕಾರಿ ಸನ್ನಿವೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಹಾಗೂ ಹಿರಿಯ ನಾಗರಿಕರಿಗೆ ಮಾತ್ರ ಅನ್ವಯವಾಗುವಂತೆ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ದೃಢೀಕರಣ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಸರ್ಕಾರದ ಈ ಘೋಷಣೆ ಕೋವಿಡ್-19 ಲಸಿಕೆಗಳ ಕ್ಲಿನಿಕಲ್ ಟ್ರಯಲ್ ಗಳು 3 ನೇ ಹಂತ ಮುಕ್ತಾಯಗೊಳ್ಳುವುದಕ್ಕೂ ಮುನ್ನ, ಅವುಗಳ ಫಲಿತಾಂಶವನ್ನು ವಿಶ್ಲೇಷಿಸುವುದಕ್ಕೂ ಮುನ್ನ ನಿರ್ದಿಷ್ಟ ವಿಭಾಗದ ಜನರಿಗೆ ಮಾತ್ರವೇ ನೀಡಲಾಗುವ ಸಾಧ್ಯತೆಗಳಿವೆ ಎಂಬ ಸೂಚನೆಯನ್ನು ನೀಡಿದೆ.
ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ಈಗಾಗಲೇ ಇದೇ ಮಾದರಿಯ ಕ್ರಮವನ್ನು ಕೈಗೊಂಡಿದೆ. ಈ ಬೆನ್ನಲ್ಲೇ ಭಾರತವೂ ಸಹ ಅಮೆರಿಕ ಮಾದರಿಯನ್ನು ಅನುಸರಿಸಲು ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಸಮಗ್ರ ಚರ್ಚೆ ಹಾಗೂ ಒಮ್ಮತಕ್ಕೆ ಬಂದ ನಂತರವಷ್ಟೇ ಕೋವಿಡ್-19 ಲಸಿಕೆ ತುರ್ತು ಬಳಕೆ ದೃಢೀಕರಣದ ಅಧಿಕೃತ ಆದೇಶ ನೀಡಲಾಗುತ್ತದೆ. ಇದನ್ನು ಔಷಧ ನಿಯಂತ್ರಕವಷ್ಟೇ ಮಾದಲು ಸಾಧ್ಯ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.