ವಾಷಿಂಗ್ಟನ್: 200,000 ಅಮೆರಿಕದ ಜನರು ಸೇರಿದಂತೆ ವಿಶ್ವದಾದ್ಯಂತ ಸುಮಾರು ಒಂದು ಮಿಲಿಯನ್ ಜನರ ಸಾವಿಗೆ ಕಾರಣವಾಗಿರುವ ಕೊರೋನಾವೈರಸ್ ತಡೆಗಟ್ಟುವಲ್ಲಿ ವಿಫಲವಾಗಿರುವುದಕ್ಕೆ ಚೀನಾ ದೇಶವನ್ನು ಹೊಣೆಗಾರ ರಾಷ್ಟ್ರವಾಗಿ ವಿಶ್ವಸಂಸ್ಥೆ ಮಾಡಬೇಕೆಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಎರಡನೇ ವಿಶ್ವ ಯುದ್ಧ ಮುಗಿದ 75 ವರ್ಷದ ನಂತರ ದೊಡ್ಡ ಜಾಗತಿಕ ತೊಂದರೆಯಲ್ಲಿ ನಾವು ಸಿಲುಕಿ ಹಾಕಿಕೊಂಡಿರುವುದನ್ನು ವಿಶ್ವಸಂಸ್ಥೆ ಗುರುತಿಸಿದೆ.ಕಣ್ಣಿಗೆ ಕಾಣದ ಶತ್ರುವಿನ ವಿರುದ್ಧ ತೀವ್ರ ಹೋರಾಟ ನಡೆಸುತ್ತಿದ್ದೇವೆ. ಚೀನಾದಿಂದ ಹರಡಿದ ವೈರಸ್ 188 ರಾಷ್ಟ್ರಗಳಲ್ಲಿ ಅನೇಕ ಮಂದಿಯನ್ನು ಬಲಿತೆಗೆದುಕೊಂಡಿದೆ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯ 75ನೇ ಅಧಿವೇಶನದಲ್ಲಿ ಟ್ರಂಪ್ ವಿಡಿಯೋ ಮೂಲಕ ಹೇಳಿಕೆ ನೀಡಿದ್ದಾರೆ.
ಕೊರೋನಾವೈರಸ್ ಹುಟ್ಟಿಕೊಂಡ ಚೀನಾ ರಾಷ್ಟ್ರ ವೈರಸ್ ತಡೆಗಟ್ಟುವಲ್ಲಿ ವಿಫಲ ವಾಗಿದ್ದು, ವಿಶ್ವಾದ್ಯಂತ ಹರಡಿರುವುದರಿಂದ ಅದನ್ನು ಹೊಣೆಗಾರ ರಾಷ್ಟ್ರವಾಗಿ ಮಾಡಬೇಕು ಎಂದು ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ್ದಾರೆ.ನಾವು ಈ ಉಜ್ವಲ ಭವಿಷ್ಯವನ್ನು ಅನುಸರಿಸುತ್ತಿರುವಾಗ, ಸಾಂಕ್ರಾಮಿಕ ರೋಗವನ್ನು ಜಗತ್ತಿನಾದ್ಯಂತ ಹರಡಿದ್ದಕ್ಕೆ ಚೀನಾ ರಾಷ್ಟ್ರವೇ ಹೊಣೆ ಹೊರಬೇಕು ಎಂದು ಅವರು ಟ್ರಂಪ್ ಹೇಳಿದ್ದಾರೆ.