ಬೆಂಗಳೂರು: ಕೋವಿಡ್-19 ನಿಂದ ಗುಣಮುಖರಾದ ರೋಗಿಗಳಲ್ಲಿ ಬೊಜ್ಜುತನ ಕಂಡುಬರುತ್ತಿರುವುದನ್ನು ವೈದ್ಯರು ಗಮನಿಸಿದ್ದಾರೆ. ಇಲ್ಲಿಯವರೆಗೆ ಅನೇಕರು ಹೃದಯದ ತೊಂದರೆಗಳು, ದೀರ್ಘಕಾಲದ ಉಸಿರಾಟದ ಕಾಯಿಲೆಗಳು, ಆಯಾಸ ಇತ್ಯಾದಿ ಸಮಸ್ಯೆಗಳನ್ನು ಗುಣಮುಖರಾದ ನಂತರ ಎದುರಿಸುತ್ತಿದ್ದಾರೆ.
ಕೋವಿಡ್-19 ನಿಂದ ಚೇತರಿಸಿಕೊಂಡ ನಂತರ ಅನೇಕ ರೋಗಿಗಳು ಹೆಚ್ಚು ಆಹಾರವನ್ನು ತಿನ್ನುತ್ತಾರೆ. ಮುಖ್ಯವಾಗಿ ಜಂಕ್ ಪುಡ್ ನಂತಹ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾರೆ. ಅಲ್ಲದೇ, ಕಡಿಮೆ ಅಥವಾ ಯಾವುದೇ ದೈಹಿಕ ಚಟುವಟಿಕೆಯಿಲ್ಲದೆ ಸುಮಾರು 10 ಕೆಜಿ ತೂಕ ದಪ್ಪಾಗುತ್ತಾರೆ. ಮತ್ತೆ ತೂಕ ಇಳಿಸಿಕೊಳ್ಳಲು ಪೌಷ್ಟಿಕತಜ್ಞರು ಅಥವಾ ಆಹಾರ ತಜ್ಞರ ಸಹಾಯವನ್ನು ಪಡೆಯುತ್ತಿದ್ದಾರೆ ಎಂದು ಡಾಕ್ಟರ್ ಗಳು ಹೇಳುತ್ತಿದ್ದಾರೆ.
ಕೋವಿಡ್- ನಿಂದ ಗುಣಮುಖರಾಗಿ ಬೊಜ್ಜುತನ ಬಂದಿರುವಂತಹ ಎರಡು ಪ್ರಕರಣಗಳನ್ನು ಪ್ರತಿದಿನ ನೋಡುತ್ತಿರುವುದಾಗಿ ಅಸ್ಟರ್ ಸಿಎಂಐ ಆಸ್ಪತ್ರೆಯ ಹಿರಿಯ ಸಮಾಲೋಚಕ ವೈದ್ಯ ಡಾ.ಮಹೇಶ್ ಚಿಕ್ಕಚನ್ನಪ್ಪ ಹೇಳುತ್ತಾರೆ.
ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಮಾಡಿಕೊಳ್ಳುವ ಸಲುವಾಗಿ ಎಣ್ಣೆ- ಕೊಬ್ಬು ಮಿಶ್ರಿತ ಆಹಾರವನ್ನು ಹೆಚ್ಚಾಗಿ ತಿಂದು ದಪ್ಪಾಗುತ್ತಿದ್ದಾರೆ. ಒಂದು ತಿಂಗಳಲ್ಲಿ 8 ರಿಂದ 10 ಕೆಜಿಯಷ್ಟು ದಪ್ಪಾಗುತ್ತಿದ್ದಾರೆ.ಅವರು ಆರೋಗ್ಯಯುಕ್ತ ಆಹಾರ ಪದಾರ್ಥ ಮತ್ತು ಒಳಾಂಗಣ ವ್ಯಾಯಾಮ ಚಟುವಟಿಕೆಗಳನ್ನು ಆರಂಭಿಸುವಂತೆ ಅವರು ಸಲಹೆ ನೀಡಿದ್ದಾರೆ.
ಕೋವಿಡ್-19 ನಿಂದ ಗುಣಮುಖರಾದ ಬಳಿಕವೂ 14 ದಿನಗಳ ಕಾಲ ಮನೆಯಲ್ಲಿಯೇ ಪ್ರತ್ಯೇಕವಾಗಿರಬೇಕು ಎಂದು ಶೇಷಾದ್ರಿಪುರಂ ಅಪೊಲೋ ಆಸ್ಪತ್ರೆ ಹಿರಿಯ ಫಿಜಿಶಿಯನ್ ಡಾ. ದಿನೇಶ್ ವಿ. ಕಾಮತ್ ತಿಳಿಸಿದ್ದಾರೆ.
ತೂಕ ಹೆಚ್ಚಾದವರಲ್ಲಿ ಮದುಮೇಹ, ಕೊಬ್ಬಿನಾಂಶ ಹೆಚ್ಚಾಗುತ್ತಿರುವುದನ್ನು ನೋಡುತ್ತಿರುವುದಾಗಿ ಅವರು ಹೇಳಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಇನ್ನೂ ಆರು ತಿಂಗಳ ಕಾಲ ಗಂಭೀರವಾದ ವೈದ್ಯಕೀಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಪೂರಕ ಆಹಾರ ಪದಾರ್ಥಗಳ ಸೇವನೆ ಉತ್ತಮವೆಂದು ಕೊಲಂಬಿಯಾ ಏಷ್ಯಾ ರೆಫೆರಲ್ ಆಸ್ಪತ್ರೆಯ ಮುಖ್ಯ ಆಹಾರ ತಜ್ಞೆ ಪವಿತ್ರಾ ಎನ್ ರಾಜು ಸಲಹೆ ನೀಡಿದ್ದಾರೆ.