ಬೆಂಗಳೂರು: ಜಗತ್ತಿನ 213 ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ನಿರ್ಧಿಷ್ಟ ಚಿಕಿತ್ಸೆ ಸೂಚಿಸಲು ಸಾಧ್ಯವಿಲ್ಲ ಎಂದು ಐಸಿಎಂಆರ್ ವಿಜ್ಞಾನಿಗಳು ಹೇಳಿದ್ದಾರೆ.
8 ತಿಂಗಳ ಹಿಂದೆ ಅಂದರೆ ಜನವರಿ 30ರಂದು ದೇಶದಲ್ಲಿ ಮೊದಲ ಕೋವಿಡ್ ಸೋಂಕು ಪ್ರಕರಣ ಕೇರಳದಲ್ಲಿ ಪತ್ತೆಯಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಈ ಮಾರಕ ಕೊರೋನಾ ವೈರಸ್ ಗೆ ಯಾವುದೇ ನಿರ್ಧಿಷ್ಟ ಚಿಕಿತ್ಸೆ ಸೂಚಿಸಲು ಸಾಧ್ಯವಿಲ್ಲ. ಈ ವರೆಗೂ ಪ್ಲಾಸ್ಮಾ ಥೆರಪಿ (ಸಿಪಿ) ಸೇರಿದಂತೆ ರೋಗ ನಿರೋಧಕ ಅಥವಾ ಚಿಕಿತ್ಸೆಯ ಒಂದು ನಿರ್ದಿಷ್ಟ ಚಿಕಿತ್ಸೆಯನ್ನು ಬೆಂಬಲಿಸಲು ಇನ್ನೂ ಯಾವುದೇ ವೈಜ್ಞಾನಿಕ ಪುರಾವೆಗಳು ಲಭ್ಯವಾಗಿಲ್ಲ ಎಂದು ಗೋರಖ್‌ಪುರದ ಐಸಿಎಂಆರ್-ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ (ಆರ್‌ಎಂಆರ್‌ಸಿ) ನಿರ್ದೇಶಕ ಡಾ.ರಜನಿ ಕಾಂತ್ ಶ್ರೀವಾಸ್ತವ ಹೇಳಿದ್ದಾರೆ.
ಪ್ಲಾಸ್ಮಾ ಥೆರಪಿ ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಬೆಂಬಲಿಸಲು ಐಸಿಎಂಆರ್ ಯಾವುದೇ ವೈಜ್ಞಾನಿಕ ಪುರಾವೆಗಳನ್ನು ಕಂಡುಕೊಂಡಿಲ್ಲ. ಕೆಲವು ರೋಗಿಗಳ ಮೇಲೆ ಪರಿಣಾಮಕಾರಿ ಎಂದು ಕಂಡುಬಂದ ಯಾವುದೇ ಔಷಧಿಗಳನ್ನು, ರೋಗನಿರೋಧಕ ಅಥವಾ ಕೋವಿಡ್-19 ಚಿಕಿತ್ಸೆಗಾಗಿ ಬಹಳಷ್ಟು ಔಷಧಿಗಳನ್ನು "ಮರು-ರೂಪಿಸಲಾಗಿದೆ". ಇದು ಹೊಸ ವೈರಸ್ ಆಗಿದ್ದು, ಇದರ ಬಗ್ಗೆ ಹೆಚ್ಚು ತಿಳಿದುಬಂದಿಲ್ಲ. ಆದರೆ ನಿರಂತರ ಅಧ್ಯಯನ ಸಾಗುತ್ತಿದೆ ಎಂದು ಹೇಳಿದೆ.
ಇದೇ ವಿಚಾರವಾಗಿ ಐಸಿಎಂಆರ್ ಪ್ಲೇಸಿಡ್ (PLACID) ಪ್ರಯೋಗದ ವರದಿಯಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಕೋವಿಡ್ ಸೋಂಕಿತರಲ್ಲಿನ ಪ್ಲಾಸ್ಮಾ ಥೆರಪಿ ಮತ್ತು ಮಧ್ಯಮ ಅನಾರೋಗ್ಯ ಸೋಂಕಿತರಿಗೆ ನೀಡುವ ಪ್ಲಾಸ್ಮಾ ಥೆರಪಿ ಹೆಚ್ಚೇನು ಪರಿಣಾಮಕಾರಿಯಾಗಿಲ್ಲ ಅಥವಾ ವ್ಯತ್ಯಾಸ ಕಂಡುಬಂದಿಲ್ಲ. ಕೋವಿಡ್ ಸೋಂಕು ಹರಡುವಿಕೆ ತಡೆಯಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಆಗಾಗ ಕೈಗಳನ್ನು ತೊಳೆದುಕೊಳ್ಳುವುದು ಅನಿವಾರ್ಯ ಎಂದು ಐಸಿಎಂಆರ್ ಹೇಳಿದೆ.
ಇದೇ ವೇಳೆ ಸೋಂಕಿನಿಂದ ಗುಣಮುಖರಾಗಿದ್ದವರಲ್ಲೂ ಮತ್ತೆ ಸೋಂಕು ಒಕ್ಕರಿಸುತ್ತಿರುವ ಕುರಿತಂತೆಯೂ ಐಸಿಎಂಆರ್ ನ ವಿಜ್ಞಾನಿಗಳು ಮಾತನಾಡಿದ್ದು, ಈ ಬಗ್ಗೆ ಈಗಲೇ ಒಂದು ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ. ವೈರಸ್ ವಿರುದ್ಧ ಹೋರಾಡಲು ವ್ಯಕ್ತಿಯಲ್ಲಿ ಪ್ರತಿಕಾಯಗಳ ಉಪಸ್ಥಿತಿ, ವ್ಯಾಪ್ತಿ ಮತ್ತು ಅವಧಿಯನ್ನು ಅವಲಂಬಿಸಿರುತ್ತದೆ. ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ. ಅಂತೆಯೇ ಸಾಂಕ್ರಾಮಿಕ ರೋಗ ಕೋವಿಡ್-19 ಯಾವ ಹಂತದಲ್ಲಿದೆ ಎಂದು ನಿರ್ಣಯಿಸುವುದು ಕಷ್ಟಕರವಾಗಿದ್ದು, ನಾವಿನ್ನೂ ಹರ್ಡ್ ಇಮ್ಯುನಿಟಿ ಪಡೆಯುವಷ್ಟು ಹತ್ತಿರವಾಗಿಲ್ಲ. ಪ್ರಸ್ತುತ ನಮ್ಮ ಗಮನ 3 ಕೋವಿಡ್ ಲಸಿಕೆಗಳ ಪ್ರಯೋಗದ ಮೇಲೆ ಕೇಂದ್ರೀಕೃತವಾಗಿದ್ದು, ಈ ಪೈಕಿ 2 ಲಸಿಕೆಗಳು ದೇಶೀಯ ನಿರ್ಮಿತವಾದದ್ದಾಗಿದೆ.
ಈ ಲಸಿಕೆಗಳು ಪ್ರಯೋಗಾತ್ಮಕ ಹಂತದಲ್ಲಿದ್ದು, ಈ ಪ್ರಯೋಗಳಿಗೆ ಯಾವುದೇ ರೀತಿಯ ಶಾರ್ಟ್ ಕಟ್ ಗಳಿಲ್ಲ. ಈ ಲಸಿಕೆಗಳ ಪ್ರಯೋಗಕ್ಕೆ ವರ್ಷಗಟ್ಟಲೆ ಹಿಡಿಯುತ್ತದೆ. ಪೊಲೀಯೋ ಗೆ ಲಸಿಕೆ ಹೊರಬರಲು ದಶಕಗಳೇ ಬೇಕಾಯಿತು. ಆದರೆ ಕೊರೋನಾ ವೈರಸ್ ಗೆ ಇಷ್ಟು ಬೇಗ ಲಸಿಕೆ ನಿರೀಕ್ಷಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇನ್ನು 6 ರಿಂದ 7ತಿಂಗಳ ಅವಧಿಯೊಳಗೆ ಲಸಿಕೆ ನಿರೀಕ್ಷಿಸಬಹುದು. ಪ್ರಸ್ತುತ 3 ವ್ಯಾಕ್ಸಿನ್ ಗಳು ಪ್ರಮುಖವಾಗಿ ಗಮನ ಸೆಳೆದಿದ್ದು, ಈ ಪೈಕಿ ಐಸಿಎಂಆರ್ ಜೊತೆ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕೊವಾಕ್ಸಿನ್, ಜೈಡಸ್ ಕ್ಯಾಡಿಲಾ ಸಂಸ್ಥೆಯ ZyCoV-D ಮತ್ತು ಆಕ್ಸ್ ಫರ್ಡ್ ಮತ್ತು ಆಸ್ಟ್ರಾ ಜೆನೆಕಾ ಸಂಸ್ಥೆಯ ಲಸಿಕೆಗಳು ಪ್ರಯೋಗಕ್ಕೆ ಡಿಜಿಸಿಐನ ಅನುಮೋದನೆ ಪಡೆದು ಸೆರೆಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಲಸಿಕೆಗಳ ಅಭಿವೃದ್ಧಿಯಲ್ಲಿ ತೊಡಗಿವೆ ಎಂದು ಹೇಳಿದ್ದಾರೆ.