ಬೀಜಿಂಗ್: ಕೊರೋನಾ ವಿರುದ್ಧದ ಹೋರಾಟದಲ್ಲಿ ಚೀನಾ ಹಾಗೂ ಡಬ್ಲ್ಯು ಹೆಚ್ ಒ ವಹಿಸಿದ ಪಾತ್ರವನ್ನು ಚೀನಾ ಅಧ್ಯಕ್ಷ ಕ್ಸೀ ಜಿನ್ಪಿಂಗ್ ಕೊಂಡಾಡಿದ್ದು, ವಿಶ್ವ ಆರೋಗ್ಯ ಸಂಸ್ಥೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಡಬ್ಲ್ಯುಹೆಚ್ಒ ವಿರುದ್ಧ ಅಮೆರಿಕಾದ ವಾಕ್ಪ್ರಹಾರದ ನಡುವೆಯೂ ಚೀನಾ ಡಬ್ಲ್ಯು ಹೆಚ್ಒಗೆ ನೆರವು ಘೋಷಣೆ ಮಾಡಿರುವುದು ಮಹತ್ವ ಪಡೆದುಕೊಂಡಿದೆ.
ಗ್ರೇಟ್ ಹಾಲ್ ಆಫ್ ಪೀಪಲ್ ನಲ್ಲಿ ವಿಡಿಯೋ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕ್ಸೀ ಜಿನ್ ಪಿಂಗ್, ಕೋವಿಡ್-19 ವಿರುದ್ಧದ ಚೀನಾ ಹೋರಾಟ, ಪ್ರೇರಣೆ, ಒಮ್ಮತ ಮತ್ತು ಸಂಪನ್ಮೂಲಗಳನ್ನು ಸಂಗ್ರಹಿಸುವುದರೆಡೆಗೆ ಚೀನಾದ ಸಮಾಜವಾದಿ ವ್ಯವಸ್ಥೆ ಹಾಗೂ ಸಂಸ್ಕೃತಿಯನ್ನು ತೋರುತ್ತದೆ ಎಂದು ಹೇಳಿದ್ದಾರೆ.
ಜನರ ಜೀವ ಉಳಿಸುವುದಕ್ಕೆ ಏನು ಬೇಕೋ ಅದನ್ನು ಮಾಡಲು ಬಯಸುತ್ತೇವೆ ಎಂದು ಕ್ಸೀ ಜಿನ್ಪಿಂಗ್ ಹೇಳಿದ್ದಾರೆ. ಇದೇ ವೇಳೆ ಡಬ್ಲ್ಯು ಹೆಚ್ ಒ ಬಗ್ಗೆಯೂ ಮಾತನಾಡಿರುವ ಕ್ಸೀ ಜಿನ್ಪಿಂಗ್, ಕೋವಿಡ್-19 ವಿರುದ್ಧದ ಜಾಗತಿಕ ಮಟ್ಟದ ಹೋರಾಟದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯನ್ನು ಬೆಂಬಲಿಸುವುದನ್ನು ಮುಂದುವರೆಸಲಾಗುವುದು ಎಂದೂ ಸಹ ಕ್ಸೀ ತಿಳಿಸಿದ್ದಾರೆ.
ಸ್ವಾರ್ಥ, ಮತ್ತೊಬ್ಬರನ್ನು ಬಲಿಪಶು ಮಾಡುವುದು, ಗೊಂದಲಕ್ಕೀಡುಮಾಡುವುದು ಕೇವಲ ಒಂದು ರಾಷ್ಟ್ರ, ಆ ರಾಷ್ಟ್ರದ ಜನತೆಯನ್ನಷ್ಟೇ ಅಲ್ಲದೇ ಎಲ್ಲಾ ರಾಷ್ಟ್ರಗಳ ಜನರಿಗೂ ನೋವುಂಟು ಮಾಡುತ್ತದೆ ಎಂದೂ ಕ್ಸೀ ಇದೇ ಸಭೆಯಲ್ಲಿ ಮಾರ್ಮಿಕವಾಗಿ ನುಡಿದ್ದಾರೆ.
ಚೀನಾದಿಂದ 209,000 ವೆಂಟಿಲೇಟರ್ ಗಳು, 1.4 ಬಿಲಿಯನ್ ಪ್ರೊಟೆಕ್ಟೀವ್ ಕವಚಗಳು, 151.5 ಬಿಲಿಯನ್ ಮಾಸ್ಕ್ ಗಳನ್ನು ಜಗತ್ತಿನ ವಿವಿಧೆಡೆ ರಫ್ತು ಮಾಡಲಾಗಿದ್ದು ಚೀನಾ ಕೋವಿಡ್-19 ನಿಂದ ಜನರ ಜೀವ ಉಳಿಸುವುದಕ್ಕೆ ಸಹಾಯ ಮಾಡಿದೆ ಎಂದು ಕ್ಸೀ ಹೇಳಿದ್ದಾರೆ.