ನವದೆಹಲಿ: 2020-21ನೇ ಸಾಲಿನ ಕಾಲೇಜು ತರಗತಿಗಳು ನವೆಂಬರ್ ಒಂದರಿಂದಲೇ ಆರಂಭವಾಗಲಿದ್ದು, ಈ ಸಂಬಂಧ ವಿಶ್ವವಿದ್ಯಾನಿಯಗಳ ಧನ ಸಹಾಯ ಆಯೋಗ(ಯುಜಿಸಿ) ಹೊಸದಾಗಿ ಮಾರ್ಗಸೂಚಿ ಹೊರಡಿಸಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಯುಜಿಸಿಯು ಪದವಿ- ಸ್ನಾತಕೋತ್ತರದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಹೊಸ ಮಾರ್ಗಸೂಚಿ ಹಾಗೂ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಅಕ್ಟೋಬರ್ ಒಳಗೆ ಪ್ರವೇಶ ಪ್ರಕ್ರಿಯೆ ಮುಗಿಸಲು ಸಂಬಂಧಿತ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ಯುಜಿಪಿ ಮಾರ್ಗಸೂಚಿ ಪ್ರಕಾರ 2020-21ನೇ ಸಾಲಿನ ಪ್ರಥಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನ. 1ರಿಂದಲೇ ತರಗತಿ ಆರಂಭವಾಗಲಿದೆ. ಒಂದು ವೇಳೆ ಅರ್ಹ ಪರೀಕ್ಷೆಗಳ ಫಲಿತಾಂಶ ಘೋಷಣೆ ವಿಳಂಬವಾದಲ್ಲಿ ಮಾತ್ರ ಸಂಬಂಧಿತ ವಿಶ್ವವಿದ್ಯಾಲಯಗಳು ನ. 18ರ ಒಳಗೆ ತರಗತಿ ಆರಂಭಿಸಬೇಕು ಎಂದು ಯುಜಿಸಿ ಮಾರ್ಗಸೂಚಿ ತಿಳಿಸಿದೆ.
ನ. 30ರ ಒಳಗೆ ಉಳಿಕೆ ಸೀಟುಗಳ ಪ್ರವೇಶಾತಿ ಕೂಡ ಮುಗಿಸಿರಬೇಕು. ಇನ್ನು ಪ್ರವೇಶಾತಿಯನ್ನು ಪ್ರವೇಶ ಪರೀಕ್ಷೆ ಮೂಲಕವೇ ನಡೆಸುವಂಥ ಹಾಗೂ ಆ ನಿಟ್ಟಿನಲ್ಲಿ ತಯಾರಾಗಿರುವಂಥ ಶಿಕ್ಷಣ ಸಂಸ್ಥೆಗಳು ಆದಷ್ಟು ಶೀಘ್ರ ಪ್ರಥಮ ವರ್ಷದ ಪಿಜಿ-ಯುಜಿ ತರಗತಿ ಆರಂಭಿಸುವಂತೆ ಸೂಚಿಸಲಾಗಿದೆ.
ಫಸ್ಟ್ ಸೆಮಿಸ್ಟರ್ ಪರೀಕ್ಷೆಯನ್ನು 2021ರ ಮಾರ್ಚ್ 8-26ರ ಅವಧಿಯಲ್ಲಿ ನಡೆಸುವಂತೆಯೂ ನಿರ್ದೇಶನ ನೀಡಿದೆ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ನಿಶಾಂಕ್ ಟ್ವೀಟ್ ಮೂಲಕ ಈ ವಿಷಯ ಪ್ರಕಟಿಸಿದ್ದಾರೆ.