ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಲಾಕ್ ಡೌನ್ ಹಿನ್ನಲೆಯಲ್ಲಿ ಸಾಲ ಮರುಪಾವತಿಸಲಾಗದ ಗ್ರಾಹಕರ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರಕ್ಕೆ ಬನ್ನಿ ಎಂದು ಸುಪ್ರೀಂ ಕೋರ್ಟ್ 2 ವಾರಗಳ ಅಂತಿಮ ಗಡುವು ನೀಡಿದೆ.
ಕೊರೋನಾವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸಾಲಗಾರರ ಮೇಲಿನ ಆರ್ಥಿಕ ಹೊರೆ ಸರಾಗಗೊಳಿಸುವ ಸಲುವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪರಿಚಯಿಸಿದ ಮೊರಟೋರಿಯಂ ಅವಧಿಯಲ್ಲಿ ಮುಂದೂಡಲ್ಪಟ್ಟ ಇಎಂಐಗಳ ಮೇಲಿನ ಬಡ್ಡಿ ಮನ್ನಾ ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಈ ಕುರಿತಂತೆ ಇಂದು ನಡೆದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರದ ಕುರಿತಂತೆ ಮಾತನಾಡಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು, ಸಾಲ ಮರುಪಾವತಿಸಲಾಗದ ಗ್ರಾಹಕರ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರಕ್ಕೆ ಬನ್ನಿ. ಸಂಕಷ್ಟದಲ್ಲಿರುವ ಗ್ರಾಹಕರಿಗೆ ಅನುಕೂಲವಾಗುವಂತೆ ಮತ್ತು ಇಎಂಐ ಕುರಿತ ಸಮಸ್ಯೆ ನಿವಾರಿಸಿ ಎಂದು ಹೇಳಿದೆ. ''ಈ ಎರಡು ವಾರಗಳಲ್ಲಿ ಏನಾಗಲಿದೆ? ... ನಾವು ಕೇಂದ್ರ ಸರ್ಕಾರಕ್ಕೆ ಮತ್ತೆ ಸಮಯ ನೀಡುತ್ತಿದ್ದೇವೆ, ಆದರೆ ದೃಢ ಮತ್ತು ಸೂಕ್ತ ನಿರ್ಧಾರ ತೆಗೆದುಕೊಳ್ಳಿ. ಇದು ಕೇಂದ್ರ ಸರ್ಕಾರ ಮತ್ತು ಆರ್ ಬಿಐಗೆ ಕೊನೆಯ ಅವಕಾಶವಾಗಿದ್ದು, ಮತ್ತೆ ಪ್ರಕರಣವನ್ನು ಮುಂದೂಡಲು ಸಾಧ್ಯವಿಲ್ಲ ಎಂದೂ ಹೇಳಿದೆ.
ಈ ಹಿಂದಿನ ವಿಚಾರಣೆಯಲ್ಲಿ ಸಾಲ ಮರುಪಾವತಿಸಲಾಗದ ಗ್ರಾಹಕರಿಗೆ ಬ್ಯಾಂಕುಗಳು ದಂಡ ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ಈ ಕುರಿತಂತೆ ಸ್ಪಷ್ಟ ನಿಲುವು ತಳೆಯುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.