ಅಬುದಾಬಿ: ಕೊರೋನಾ ಆತಂಕದ ನಡುವೆಯೂ ಇಲ್ಲಿನ ಇಲ್ಲಿನ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2020 ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಐದು ವಿಕೆಟ್ ಗಳಿಂದ ಸೋಲಿಸಿದ ಚೆನ್ನೆ ಸೂಪರ್ ಕಿಂಗ್ಸ್ ತಂಡ ಗೆಲುವಿನ ನಗೆ ಬೀರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಒವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಮುಂಬೈ ಇಂಡಿಯನ್ಸ್ ಪರ ಸೌರಭ್ ತಿವಾರಿ 42, ಕ್ವಿಂಟನ್ ಡಿ ಕಾಕ್ 33, ಕೀರನ್ ಪೊಲಾರ್ಡ್ 18 ರನ್ ಗಳಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಬೌಲಿಂಗ್ ಮಾಡಿದ ಲುಂಗಿ ಎನ್ಗಿಡಿ 4 ಓವರ್ ಗಳಲ್ಲಿ 38 ರನ್ ಗಳಿಗೆ 3 ವಿಕೆಟ್ ಪಡೆದರೆ, ದೀಪಕ್ ಚಹರ್, 4 ಓವರ್ ಗಳಲ್ಲಿ 32 ರನ್ ಗಳಿಗೆ 2 ವಿಕೆಟ್ ಹಾಗೂ ರವೀಂದ್ರ ಜಡೇಜಾ 4 ಓವರ್ ಗಳಲ್ಲಿ 42 ರನ್ ನೀಡಿ 2 ವಿಕೆಟ್ ಪಡೆದುಕೊಂಡರು.
ಮುಂಬೈ ಇಂಡಿಯನ್ಸ್ ನೀಡಿದ 162 ರನ್ ಗಳ ಗುರಿ ಬೆನ್ನತ್ತಿದ್ದ ಸೂಪರ್ ಕಿಂಗ್ಸ್ ತಂಡ 19.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು. ಚೆನ್ನೈ ಸೂಪರ್ ಕಿಂಗ್ಸ್ ಪರ ಅಂಬಟಿ ರಾಯುಡು ಆಕರ್ಷಕ 71, ಪಾಫ್ ಡು ಪ್ಲೆಸ್ಸಿಸ್ 58, ಸ್ಯಾಮ್ ಕರನ್ 18ರನ್ ಗಳಿಸಿದರು.
ಮುಂಬೈ ಇಂಡಿಯನ್ಸ್ ಪರ ಟ್ರೆಂಟ್ ಬೌಲ್ಟ್ ಹಾಗೂ ಜೇಮ್ಸ್ ಪ್ಯಾಟಿನ್ಸನ್ ಹಾಗೂ ರಾಹುಲ್ ಚಹರ್ ತಲಾ ಒಂದೊಂದು ವಿಕೆಟ್ ಗಳನ್ನು ಪಡೆದುಕೊಂಡರು. ಅಂಬಟಿ ರಾಯುಡು ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.