ಕುಂಬಳೆ: ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಯ ದೃಷ್ಟಿಯಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಸಂಸ್ಥೆಯು ಹಲವಾರು ಕಾರ್ಯಗಳನ್ನು ನಡೆಸುತ್ತಿದೆ. 2020ರ ಯುಗಾದಿ ಪರ್ವದಲ್ಲಿ ಆಯೋಜಿಸಲಾಗಿದ್ದ ``ವಿಷು ವಿಶೇಷ ಸ್ಪರ್ಧೆ - 2020'' ಯಶಸ್ವಿಯಾಗಿ ನಡೆದಿದೆ. ಲಾಕ್ ಡೌನ್ ಗಳು ಹಾಗೂ ಅಂಚೆ ಅಲಭ್ಯತೆಯಿಂದ ಸ್ಪರ್ಧೆಗಳ ಮೌಲ್ಯಮಾಪನವು ಜುಲೈಗೆ ಮುಂದೂಡಲಾಗಿತ್ತು. ಕತೆ, ಕವನ, ಲಘುಬರಹ, ಪ್ರಬಂಧ - ಹೀಗೆ ನಾಲ್ಕು ವಿಭಾಗದಲ್ಲಿ ನಡೆದ ಸ್ಪರ್ಧೆಗಳಿಗೆ ಅಂಚೆ ಹಾಗೂ ಮಿಂಚಂಚೆ(ಈ-ಮೇಲ್) ಮೂಲಕ ನೂರಾರು ಮಂದಿ ಭಾಗವಹಿಸಿದ್ದರು. ಸ್ಪರ್ಧೆಗಳ ಮೌಲ್ಯಮಾಪನವನ್ನು ಎಸ್. ಕೆ. ಗೋಪಾಲಕೃಷ್ಣ ಭಟ್, ಗಣಪತಿ ಭಟ್ ಮಧುರಕಾನನ, ಸೂರ್ಯನಾರಾಯಣ ವಜ್ರಾಂಗಿ, ಪ್ರಶಾಂತ ಭಟ್ ಕೆ ಹಾಗೂ ಶರತ್ ಭಟ್ ಸೇರಾಜೆ ಮತ್ತು ಒಪ್ಪಣ್ಣ ಬಳಗದ ಹತ್ತು ಹಿರಿಯರು ನಡೆಸಿಕೊಟ್ಟರು. ಒಪ್ಪಣ್ಣ ಬಳಗದ ಸದಸ್ಯರಾದ ಕುಮಾರಸ್ವಾಮಿ ತೆಕ್ಕುಂಜ ಮತ್ತು ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ ಇವರು ಸ್ಪರ್ಧಾ ಸಂಯೋಜಕರಾಗಿದ್ದರು.
ಕಥಾ ಸ್ಪರ್ಧೆಯಲ್ಲಿ ಪ್ರಥಮ ಪ್ರಸನ್ನಾ ವಿ. ಚೆಕ್ಕೆಮನೆ, ದ್ವಿತೀಯ ಭಾರತೀ ಕೊಲ್ಲರಮಜಲು, ಲಘು ಬರಹ ಸ್ಪರ್ಧೆಯಲ್ಲಿ ಪ್ರಥಮ ರಜನೀ ಭಟ್, ದ್ವಿತೀಯ ಲಲಿತಾಲಕ್ಷ್ಮೀ ಎನ್ ಭಟ್, ಕವನ ಸ್ಪರ್ಧೆಯಲ್ಲಿ ಪ್ರಥಮ ಇಂದಿರಾ ಜಾನಕೀ, ದ್ವಿತೀಯ ಲಲಿತಲಕ್ಷ್ಮೀ ಎನ್ ಭಟ್, ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಗುಣಾಜೆ ರಾಮಚಂದ್ರ ಭಟ್, ದ್ವಿತೀಯ ರೂಪಪ್ರಸಾದ್ ಕೋಡಿಂಬಳ ಆಯ್ಕೆಯಾಗಿರುವರು.
ಕರೊನಾ ಮಹಾಮಾರಿಯಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಸರ್ಕಾರದ ಆದೇಶದಂತೆ ಈ ವರ್ಷ ವಾರ್ಷಿಕ ಕಾರ್ಯಕ್ರಮವಿರುವುದಿಲ್ಲ. ವಿಜೇತರಿಗೆ ಪ್ರಶಸ್ತಿಯನ್ನು ವೈಯಕ್ತಿಕವಾಗಿ ತಲುಪಿಸಿ, ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಮಹೇಶ ಎಳ್ಯಡ್ಕ ತಿಳಿಸಿದ್ದಾರೆ.