ವಿಶ್ವಸಂಶ್ಥೆ: ಜಗತ್ತಿನ 213ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಾ, ಇಡೀ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ಮಾರಕ ಕೊರೋನಾ ವೈರಸ್ ದಾಳಿಗೆ 2021ರ ವೇಳೆ ಜಗತ್ತಿನ ಸುಮಾರು 4.7 ಕೋಟಿ ಮಹಿಳೆಯರು ಬಡತನ ರೇಖೆಯಿಂದ ಕಡುಬಡತನ ರೇಖೆಗೆ ತಳ್ಳಲ್ಪಡುತ್ತಾರೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಕೋವಿಡ್-19 ಕಾರಣದಿಂದ ಉದ್ಭವಿಸಿರುವ ಜಾಗತಿಕ ಆರ್ಥಿಕ ಪರಿಸ್ಥಿತಿಯು ಜಗತ್ತಿನಾದ್ಯಂತ 2021ರ ವೇಳೆಗೆ 4.7 ಕೋಟಿ ಮಹಿಳೆಯರು, ಬಾಲಕಿಯರನ್ನು ಕಡುಬಡತನದ ಸ್ಥಿತಿಗೆ ದೂಡಲಿದೆ. ಇವರನ್ನು ಬಡತನದ ರೇಖೆಯಿಂದ ಮತ್ತೆ ಮೇಲೆತ್ತಲು ದಶಕದಷ್ಟು ಅವಧಿಯ ಅಭಿವೃದ್ಧಿ ಬೇಕಾಗಬಹುದು ಎಂದು ವಿಶ್ವಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಹೇಳಿವೆ.
ಈ ಬಗ್ಗೆ ಮಾಹಿತಿ ನೀಡಿರುವ ವಿಶ್ವಸಂಸ್ಥೆ ಮಹಿಳಾ ಕಾರ್ಯನಿರ್ವಾಹಕ ನಿರ್ದೇಶಕಾದ ಮ್ಲಾಂಬೊ ಗ್ಸುಕಾ ಅವರು, 'ವಿಶ್ವಸಂಸ್ಥೆಯ ಮಹಿಳೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ (ಯುಎನ್‌ಡಿಪಿ) ಅಂಕಿಅಂಶಗಳ ಅನ್ವಯ ಜಗತ್ತಿನಲ್ಲಿ ಕಡು ಬಡತನದಲ್ಲಿರುವ ಮಹಿಳೆಯರು, ಬಾಲಕಿಯರ ಸಂಖ್ಯೆ ಹೆಚ್ಚಲಿದ್ದು, ಈ ವರ್ಗದ ಪುರುಷ ಮತ್ತು ಮಹಿಳೆ ನಡುವಿನ ಅಂತರವು ಮತ್ತಷ್ಟು ವೃದ್ಧಿಸಲಿದೆ. ಕಡುಬಡತನದ ಮಹಿಳೆಯರ ಪ್ರಮಾಣ 2019 ಮತ್ತು 2021ರಲ್ಲಿ ಶೇ 2.7ರಷ್ಟು ಇಳಿಯಲಿದೆ ಎಂದು ಹಿಂದೆ ಅಂದಾಜಿಸಲಾಗಿತ್ತು. ಆದರೆ ಕೊರೊನಾ ಮತ್ತು ಆರ್ಥಿಕ ಕುಸಿತದ ಕಾರಣ ಹೊಸ ವಿಶ್ಲೇಷಣೆಯಂತೆ ಇದು ಈಗ 9.1ರಷ್ಟು ಏರಲಿದೆ. ಕೊರೋನಾ ಸಾಂಕ್ರಾಮಿಕ ಜಗತ್ತಿನಾದ್ಯಂತ 2021 ವೇಳೆಗೆ 9.6 ಕೋಟಿ ಜನರನ್ನು ಕಡುಬಡತನದ ಸ್ಥಿತಿಗೆ ದೂಡಲಿದೆ. ಇವರಲ್ಲಿ 4.7 ಕೋಟಿ ಮಹಿಳೆಯರು, ಬಾಲಕಿಯರು ಎಂದು ಹೇಳಿದ್ದಾರೆ.
ಅಂತೆಯೇ ಜಾಗತಿಕವಾಗಿಯೂ ಬಡತನದ ಸ್ಥಿತಿ ಮೇಲೆ ಕೊರೋನಾ ಸಾಂಕ್ರಾಮಿಕ ಬಿಕ್ಕಟ್ಟು ಪರಿಣಾಮ ಬೀರಲಿದ್ದು, ಇದರ ಹೆಚ್ಚಿನ ಪರಿಣಾಮ ಮಹಿಳೆಯರ ಮೇಲೆ ಮುಖ್ಯವಾಗಿ ವಯಸ್ಕ ಮಹಿಳೆಯರ ಮೇಲೆ ಆಗಲಿದೆ. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರು ಹೆಚ್ಚಿನ ಹೊಣೆಗಾರಿಕೆ ಹೊತ್ತುಕೊಳ್ಳುತ್ತಾರೆ. ಅವರು ಕಡಿಮೆ ಸಂಪಾದಿಸಲಿದ್ದು, ಕಡಿಮೆ ಉಳಿತಾಯ ಮಾಡುತ್ತಾರೆ. ಕಡಿಮೆ ಭದ್ರತೆಯ ಉದ್ಯೋಗ ನಿರ್ವಹಿಸುತ್ತಾರೆ. ಹೆಚ್ಚಿನದಾಗಿ ಪುರುಷರಿಗೆ ಹೋಲಿಸಿದರೆ ಮಹಿಳೆಯರ ಉದ್ಯೋಗಾವಕಾಶಗಳು ಶೇ 19ರಷ್ಟು ಹೆಚ್ಚಿನ ಅಪಾಯ ಸ್ಥಿತಿ ಎದುರಿಸುತ್ತಿವೆ ಎಂದು ಮ್ಲಾಂಬೊ ಗ್ಸುಕಾ ಅಭಿಪ್ರಾಯಪಟ್ಟಿದ್ದಾರೆ.