ನವದೆಹಲಿ: ಇದೇ ವರ್ಷ ನವೆಂಬರ್ 20 ರಿಂದ 28ರ ವರೆಗೆ ಗೋವಾದಲ್ಲಿ ನಡೆಯಬೇಕಿದ್ದ 51ನೇ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್‌ಎಫ್‌ಐ)ವನ್ನು ಜನವರಿ 2021ಕ್ಕೆ ಮುಂದೂಡಿಕೆಯಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಕಾಶ್ ಜಾವಡೇಕರ್ ಅವರು ಗುರುವಾರ ತಿಳಿಸಿದ್ದಾರೆ.
ಈ ಕುರಿತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರೊಂದಿಗೆ ಚರ್ಚಿಸಿದ ನಂತರ ಚಲನಚಿತ್ರೋತ್ಸವ ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಜಾವಡೇಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್ ಪ್ರಕಾರ 2021ರ ಜನವರಿ 16 ರಿಂದ 24 ರವರೆಗೆ ಗೋವಾದಲ್ಲಿ ಚಲನಚಿತ್ರೋತ್ಸವವ ನಡೆಸಲು ಜಂಟಿಯಾಗಿ ನಿರ್ಧರಿಸಲಾಗಿದೆ" ಎಂದು ಜಾವಡೇಕರ್ ಹೇಳಿದ್ದಾರೆ.
ಈ ಬಾರಿ ಚಲನಚಿತ್ರೋತ್ಸವವನ್ನು ಹೈಬ್ರಿಡ್ ಸ್ವರೂಪದಲ್ಲಿ ನಡೆಸಲಾಗುವುದು, ಅಂದರೆ ವರ್ಚುವಲ್ ಮತ್ತು ಭೌತಿಕ ಸ್ವರೂಪದಲ್ಲಿರಲಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮುಂದೂಡಲಾಗಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.