ಮಂಜೇಶ್ವರ: ಜಿಲ್ಲೆಯ ಗಡಿ ತಾಲೂಕು ಮಂಜೇಶ್ವರ ತಾಲೂಕು ಆಸ್ಪತ್ರೆ(ಉಪ್ಪಳ-ನಯಾಬಜಾರ್)ಯಲ್ಲಿ ಡಯಾಲಿಸಿಸ್ ಘಟಕ ಸಜ್ಜುಗೊಂಡಿದ್ದು ಸೆ.22 ರಂದು ಉದ್ಘಾಟನೆಗೊಂಡು ಸೇವೆಗೆ ಲಭ್ಯವಾಗಲಿದೆ.
ಆರೋಗ್ಯ ಸೇವೆಗಳಿಗಾಗಿ ಮಂಗಳೂರು ಮತ್ತು ಕಾಸರಗೋಡಿನಂತಹ ಪ್ರದೇಶಗಳನ್ನು ಅವಲಂಬಿಸಿರುವ ಜಿಲ್ಲೆಯ ಉತ್ತರ ವ್ಯಾಪ್ತಿಯ ಗ್ರಾಮಗಳ ಜನರಿಗೆ ಪರಿಹಾರ ಒದಗಿಸಲು ಡಯಾಲಿಸಿಸ್ ಕೇಂದ್ರವನ್ನು ವಿಶೇಷ ಮುತುವರ್ಜಿಯಿಂದ ವ್ಯವಸ್ಥೆಗೊಳಿಸಲಾಗಿದೆ. ಮಂಜೇಶ್ವರ ಬ್ಲಾಕ್ ಪಂಚಾಯತಿಯ ಸುಧೀರ್ಘ ಕಾಲದ ಕನಸೊಂದು ಈ ಮೂಲಕ ಸಾಕಾರಗೊಳ್ಳಲಿದ್ದು ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಕಾಂಪೌಂಡ್ ನಲ್ಲಿ ಈ ಘಟಕ ಕಾರ್ಯನಿರ್ವಹಿಸುತ್ತಿದೆ. ಕೋವಿಡ್ -19 ನಿಬರ್ಂಧದ ಭಾಗವಾಗಿ ಕರ್ನಾಟಕ ಸರ್ಕಾರ ಗಡಿಯನ್ನು ಮುಚ್ಚಿದಾಗ, ಚಿಕಿತ್ಸೆಗಾಗಿ ಮಂಗಳೂರನ್ನು ಅವಲಂಬಿಸಿದ್ದ ಮಂಜೇಶ್ವರ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಜನರು ಸಾಕಷ್ಟು ತೊಂದರೆ ಅನುಭವಿಸಿದರು. ಚಿಕಿತ್ಸೆಯ ನಿರಾಕರಣೆಯಿಂದಾಗಿ ಅನೇಕ ಜೀವಗಳು ಕಳೆದುಹೋಗಿವೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಈ ಯೋಜನೆಯನ್ನು ನನಸಾಗಿಸಲು ಶಾಸಕ ಎಂ.ಸಿ. ಖಮರುದ್ದೀನ್ ಮತ್ತು ಬ್ಲಾಕ್ ಪಂಚಾಯತಿ ತುರ್ತು ಕ್ರಮಕೈಗೊಂಡು ಇದೀಗ ಸೇವೆಗೆ ಸಜ್ಜಾಗಿದೆ ಎಂದು ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ಹೇಳಿದ್ದಾರೆ.
ದಿವಂಗತ ಶಾಸಕ ಪಿ.ಬಿ.ಅಬ್ದುಲ್ ರಜಾಕ್ ಅವರ ಆಸ್ತಿ ಅಭಿವೃದ್ಧಿ ನಿಧಿಯಿಂದ 50 ಲಕ್ಷ ರೂ. ಬಳಸಿ ಕಟ್ಟಡದ ನಿರ್ಮಾಣ ಪೂರ್ಣಗೊಂಡಿದೆ. ಇದಲ್ಲದೆ, ಉದ್ಯಮಿ ಮತ್ತು ಉಪ್ಪಳದ ಆಯಿಷಾ ಫೌಂಡೇಶನ್‍ನ ಅಧ್ಯಕ್ಷ ಅಬ್ದುಲ್ ಲತೀಫ್ ಉಪ್ಪಳಗೇಟ್ ಅವರು ಸುಮಾರು 80 ಲಕ್ಷ ರೂಪಾಯಿ ಮೌಲ್ಯದ 10 ಡಯಾಲಿಸಿಸ್ ಯಂತ್ರಗಳನ್ನು ಉಚಿತವಾಗಿ ನೀಡಿರುವರು. ವಿದ್ಯುದೀಕರಣ, ಟ್ರಾನ್ಸ್‍ಫಾರ್ಮರ್ ಅಳವಡಿಕೆ, ಜನರೇಟರ್ ಮತ್ತು ಹವಾನಿಯಂತ್ರಣಕ್ಕಾಗಿ ಸುಮಾರು 50 ಲಕ್ಷ ರೂ.ವನ್ನು ಬ್ಲಾ.ಪಂ.ಒದಗಿಸಿದೆ. ಡಯಾಲಿಸಿಸ್ ಕೇಂದ್ರದಲ್ಲಿ ಆರ್‍ಒ ಸ್ಥಾವರ ಮತ್ತು ಆಸನ ಸೌಲಭ್ಯಗಳನ್ನು ಶಾಸಕರ ಆಸ್ತಿ ಅಭಿವೃದ್ಧಿ ನಿಧಿಯಿಂದ ಅಭಿವೃದ್ಧಿಪಡಿಸಲಾಗಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜಿನ ಭಾಗವಾಗಿ ರೋಗಿಗಳಿಗೆ ಹಾಸಿಗೆಗಳು ಮತ್ತು ಇತರ ಉಪಕರಣಗಳನ್ನು ಒದಗಿಸಲಾಗಿದೆ.
ಬಡವರಿಗೆ ಉಚಿತ:
ಆರ್ಥಿಕವಾಗಿ ಹಿಂದುಳಿದ ಬಿಪಿಎಲ್ ವಿಭಾಗ, ಎಸ್‍ಸಿ ಮತ್ತು ಎಸ್‍ಟಿಗಳಿಗೆ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿದೆ. ಮೊದಲ ಹಂತದಲ್ಲಿ ನೋಂದಾಯಿತರಾದವರಿಂದ ಮೂರು ಪಾಳಿಯಲ್ಲಿ 90 ಜನರಿಗೆ ಸೇವೆ ನೀಡಲಾಗುವುದು. ಡಯಾಲಿಸಿಸ್‍ಗೆ 250 ರೂ. ವೆಚ್ಚವಾಗುವುದರಿಂದ ಎಲ್ಲಾ ರೋಗಿಗಳು ಪ್ರಯೋಜನ ಪಡೆಯಬಹುದು. ಡಯಾಲಿಸಿಸ್ ಕೇಂದ್ರವು ಕಳೆದ ಎರಡು ವರ್ಷಗಳಿಂದ ಬ್ಲಾಕ್ ಪಂಚಾಯತಿ ಸಮಿತಿಯ ಪ್ರಯತ್ನಗಳ ಫಲವಾಗಿದೆ ಎಂದು ಎಕೆಎಂ ಅಶ್ರಫ್ ಹೇಳಿರುವರು. ಚಿಕಿತ್ಸೆಯ ಜೊತೆಗೆ, ಮೂತ್ರಪಿಂಡದ ರೋಗಿಗಳಿಗೆ ಪರಿಹಾರ ಕಾರ್ಯ ಮತ್ತು ಮೂತ್ರಪಿಂಡ ಕಾಯಿಲೆಯ ವಿರುದ್ಧ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಸಹ ಡಯಾಲಿಸಿಸ್ ಕೇಂದ್ರದ ಆಶ್ರಯದಲ್ಲಿ ಆಯೋಜಿಸಲಾಗುವುದು ಎಂದಿರುವರು.
ಚಾಲನೆಯಲ್ಲಿರುವ ಮಂಜೇಶ್ವರ ಚಾರಿಟೇಬಲ್ ಸೊಸೈಟಿ:
ಡಯಾಲಿಸಿಸ್ ಕೇಂದ್ರದ ಕಾರ್ಯಾಚರಣೆಗಾಗಿ ವಿಶೇಷ ನೀತಿ ಸಂಹಿತೆಯೊಂದಿಗೆ ಬ್ಲಾಕ್ ಪಂಚಾಯತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಬ್ಲಾಕ್ ಪಂಚಾಯತಿ ಆಡಳಿತ ಸಮಿತಿಯ ಆಶ್ರಯದಲ್ಲಿ ಮಂಜೇಶ್ವರ ಚಾರಿಟೇಬಲ್ ಸೊಸೈಟಿಯನ್ನು ರಚಿಸಲಾಗಿದೆ. ಈ ಕೇಂದ್ರವನ್ನು 250 ಸದಸ್ಯರ ತಂಡ ನಿರ್ವಹಿಸುತ್ತಿದ್ದು ಇದರಲ್ಲಿ ಜನಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು, ಅಧಿಕಾರಿಗಳು ಮತ್ತು ಎಚ್‍ಎಂಸಿ ಪ್ರತಿನಿಧಿಗಳು ಸೇರಿದ್ದಾರೆ. ಮಾಜಿ ಶಾಸಕರ ನೆನಪಿಗಾಗಿ ಈ ಕೇಂದ್ರವನ್ನು ಪಿ.ಬಿ. ಅಬ್ದುಲ್ ರಜಾಕ್ ಸ್ಮಾರಕ ಡಯಾಲಿಸಿಸ್ ಸೆಂಟರ್ ಎಂದು ಕರೆಯಲಾಗುತ್ತದೆ.