ನವದೆಹಲಿ: ದೇಶದಲ್ಲಿ ದೈನಂದಿನ ಕೊರೋನಾ ವೈರಸ್ ಪ್ರಕರಣಗಳ ಅಬ್ಬರ ತಿಂಗಳ ಬಳಿಕ ಇಳಿಕೆ ಕಂಡಿದ್ದು, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 83,347 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,646,011ಕ್ಕೆ ಏರಿಕೆಯಾಗಿದೆ.
ಒಂದೇ ದಿನ ಬರೋಬ್ಬರಿ 1,082 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಕೂಡ 90,020ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ಮಾಹಿತಿ ನೀಡಿದೆ.
5,646,011 ಮಂದಿ ಸೋಂಕಿತರ ಪೈಕಿ 45,87,614 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ದೇಶದಲ್ಲಿನ್ನೂ 9,68,377 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಗುಣಮುಖ ಪ್ರಮಾಣ ಶೇ.80.86ಕ್ಕೆ ಏರಿಕೆಯಾಗಿದ್ದು, ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 9.68 ಲಕ್ಷಕ್ಕೆ ಇಳಿಕೆ ಕಂಡಿದೆ. ಕಳೆದ ನಾಲ್ಕು ದಿನಗಳಿಂದ ದೇಶದಲ್ಲಿ ದಾಖಲಾಗುತ್ತಿರುವ ಕೊರೋನಾ ವೈರಸ್ ಪ್ರಕರಣಗಳಿಗಿಂತಲೂ ಚೇತರಿಕೆ ಪ್ರಮಾಣವೇ ಅಧಿಕವಾಗಿದೆ.