ಗುವಾಹಟಿ: ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಅವರು ತನ್ನ ಜನರನ್ನು ಭೇಟಿ ಮಾಡಲು ಸುಮಾರು 11 ಗಂಟೆಗಳ ಕಾಲ 24 ಕಿ.ಮೀ ದೂರ ನಡೆಯುವ ಮೂಲಕ ಅಧಿಕಾರ ಸಿಕ್ಕಮೇಲೆ ಮತದಾರರನ್ನು ಮರೆಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.
ಪೆಮಾ ಖಂಡು ಅವರು ತನ್ನ ಕ್ಷೇತ್ರದ 58 ಮತದಾರರ ಕಷ್ಟಸುಖ ಅರಿಯಲು ಸ್ವತಃ ತಾವೇ 24 ಕಿ.ಮೀ ನಡೆದ ಅಚ್ಚರಿ ಮೂಡಿಸಿದ್ದಾರೆ.
ಸಿಎಂ ಪೆಮಾ ಖಂಡು, ತವಾಂಗ್ ಜಿಲ್ಲೆಯ ಮುಕ್ತೋ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಅವರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಲುಗುಥಾಂಗ್ ಎಂಬ ಗ್ರಾಮ ಭಾರತ ಮತ್ತು ಚೀನಾ ಗಡಿಗೆ ಹೊಂದಿಕೊಂಡ ಪ್ರದೇಶದಲ್ಲಿನ ಕುಗ್ರಾಮವಾಗಿದೆ. ಸಮುದ್ರ ಮಟ್ಟದಿಂದ 14500 ಅಡಿ ಎತ್ತರದಲ್ಲಿರುವ ಈ ಗ್ರಾಮದಲ್ಲಿ ಕೇವಲ 10 ಕುಟುಂಬಗಳ 58 ಸದಸ್ಯರು ವಾಸಿಸುತ್ತಿದ್ದಾರೆ.
ಈ ಗ್ರಾಮಕ್ಕೆ ಯಾವುದೇ ರಸ್ತೆ ಸಂಪರ್ಕ ಇಲ್ಲ. ಈ ಹಿನ್ನೆಲೆಯಲ್ಲಿ ಸ್ವತಃ ಅವರ ಸಮಸ್ಯೆ ಅರಿಯಲೆಂದು ಸಿಎಂ ಪೆಮಾ ಖಂಡು 3 ದಿನಗಳ ಹಿಂದೆ ಸುಮಾರು 11 ತಾಸು ಸತತವಾಗಿ ನಡೆದು 24 ಕಿ.ಮೀ ದೂರವನ್ನು ಕ್ರಮಿಸಿ ಲುಗುಥಾಂಗ್ ತಲುಪಿದ್ದಾರೆ. ಬಳಿಕ ಅಲ್ಲಿಯೇ 2 ದಿನ ಕಳೆದು ಅವರ ಸಮಸ್ಯೆಯನ್ನು ಆಲಿಸಿ ಮರಳಿದ್ದಾರೆ. ಈ ವೇಳೆ ಅವರೊಂದಿಗೆ ಕೇವಲ ಒಬ್ಬ ಭದ್ರತಾ ಮತ್ತು ಕೆಲ ಗ್ರಾಮಸ್ಥರು ಮಾತ್ರವೇ ಇದ್ದರು.
ಈ ಕುರಿತು ಟ್ವೀಟ್ ಮಾಡಿರುವ ಖಂಡು, "24 ಕಿ.ಮೀ ಚಾರಣ, 11 ಗಂಟೆಗಳ ತಾಜಾ ಗಾಳಿ ಮತ್ತು ಪ್ರಕೃತಿ ಅತ್ಯುತ್ತಮ; ತವಾಂಗ್ ಜಿಲ್ಲೆಯ ಕಾರ್ಪು-ಲಾ (16,000 ಅಡಿ) ದಿಂದ ಲುಗುಥಾಂಗ್ (14,500 ಅಡಿ) ದಾಟಿದೆ. ಸ್ವರ್ಗ ಸ್ಪರ್ಶಿಸಿದ ಅನುಭವ” ಎಂದು ಸಿಎಂ ಬಣ್ಣಿಸಿದ್ದಾರೆ.