ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನದಲ್ಲಿ ಇದೇ ಸೆಪ್ಟೆಂಬರ್ 26ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ಈ ಬಾರಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಲಿರುವ ನಾಯಕರ ತಾತ್ಕಾಲಿಕ ಪಟ್ಟಿ ಸಿದ್ಧವಾಗಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರೂ ಇದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಪ್ರಧಾನಿ ಮೋದಿ ಅವರು ಇದೇ ಸೆ. 26 ರಂದು ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಗಳಿವೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮತ್ತು ಸಮ್ಮೇಳನ ನಿರ್ವಹಣಾ ಇಲಾಖೆಯು ಸಾಮಾನ್ಯ ಸಭೆಯ 75ನೇ ಅಧಿವೇಶನದಲ್ಲಿ ಮಾತನಾಡಲಿರುವ ಕೆಲ ನಾಯಕರ ತಾತ್ಕಲಿಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಸೇರ್ಪಡೆಯಾಗಿದೆ. ಈ ಪಟ್ಟಿಯಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಹಸನ್ ರೌಹಾನಿ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುವಲ್ ಮ್ಯಾಕ್ರನ್ ಹೆಸರು ಕೂಡ ಇದೆ. ಆದರೆ, ಈ ಪಟ್ಟಿ ತಾತ್ಕಾಲಿಕವಾಗಿದ್ದು ಪರಿಷ್ಕರಣೆ ಆಗುವ ಸಾಧ್ಯತೆಗಳೂ ಇವೆ.
ವಿಶ್ವಸಂಸ್ಥೆಯ 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಾಮಾನ್ಯ ಸಭೆಯ ಅಧಿವೇಶನ ನಡೆಯುತ್ತಿದ್ದು, ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ. ಪ್ರಮುಖ ದೇಶಗಳ ನಾಯಕರು ತಮ್ಮ ಭಾಷಣದ ವಿಡಿಯೊಗಳನ್ನು ಸಾಮಾನ್ಯ ಸಭೆಗೆ ಮುಂಚಿತವಾಗಿಯೇ ಕಳುಹಿಸಲಿದ್ದಾರೆ. ಸಾಮಾನ್ಯ ಸಭೆಯ 75ನೇ ಅಧಿವೇಶನವು ಇದೇ 22ರಿಂದ 29 ರವರೆಗೆ ನಡೆಯಲಿದೆ.