ನವದೆಹಲಿ: ಎನ್ ಡಿಎ ಮಿತ್ರ ಪಕ್ಷ ಶಿರೋಮಣಿ ಅಕಾಲಿದಳ ಹಾಗೂ ವಿಪಕ್ಷಗಳ ಪ್ರತಿಭಟನೆ, ವಿರೋಧದ ನಡುವೆಯೇ ಕೃಷಿ ಕ್ಷೇತ್ರದ ಎರಡು ಮಸೂದೆಗಳಿಗೆ ಲೋಕಸಭೆಯಲ್ಲಿ ಅಂಗೀಕಾರ ಪಡೆಯುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ.
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ ಹಾಗೂ ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆಗಳಿಗೆ ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರ ದೊರೆತಿದೆ. ಆದರೆ ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷಗಳು ಮಸೂದೆ ವಿರೋಧಿಸಿ ಸಭಾತ್ಯಾಗ ಮಾಡಿದವು.
ಇದಕ್ಕೂ ಮುನ್ನ ಮಂಗಳವಾರದಂದು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮತ್ತೊಂದು ಮಸೂದೆ ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಗಿತ್ತು. ಸುಗ್ರೀವಾಜ್ಞೆಗಳ ಮೂಲಕ ಈ ಎಲ್ಲಾ ಮಸೂದೆಗಳನ್ನು ಜಾರಿಗೆ ತರಲಾಗಿತ್ತು.
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮಸೂದೆ ಅಂಗೀಕಾರವನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾವಿತ ಮಸೂದೆಗಳನ್ನು ಐತಿಹಾಸಿಕ ಎಂದು ಬಣ್ಣಿಸಿದ್ದು ಮಸೂದೆಯಿಂದ ರೈತರಿಗೆ ಲಾಭ ಹೆಚ್ಚಾಗಲಿದೆ. ಆದರೆ ಕೆಲವು ಶಕ್ತಿಗಳು ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಮೋದಿ ಮಸೂದೆ ವಿರೋಧಿಸುತ್ತಿರುವವರನ್ನು ಟೀಕಿಸಿದ್ದಾರೆ.
ಕೃಷಿ ಸಂಬಂಧಿತ ಮಸೂದೆಗಳನ್ನು ವಿರೋಧಿಸಿ ವಿವಿಧ ಸಂಘಟನೆಗಳು ಪಟಿಯಾಲದಲ್ಲಿ ಸೆ.17 ರಂದು ನಡೆದ ಪ್ರತಿಭಟನೆ