ನವದೆಹಲಿ: ರಾಜ್ಯಸಭೆಯಲ್ಲಿ ವಿಪಕ್ಷಗಳ ತೀವ್ರ ವಿರೋಧ, ಪ್ರತಿಭಟನೆಗಳ ನಡುವೆಯೇ ಕೃಷಿಗೆ ಸಂಬಂಧಿಸಿದ ಎರಡು ಪ್ರಮುಖ ಮಸೂದೆಗಳಿಗೆ ಅಂಗೀಕಾರ ಪಡೆಯುವುದರಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ.
ರೈತರು ಮತ್ತು ಬೆಳೆಗಳ ವ್ಯಾಪಾರ, ವಾಣಿಜ್ಯ ಮಸೂದೆ 2020 (ಪ್ರಚಾರ ಮತ್ತು ಸೌಲಭ್ಯ) ಮತ್ತು ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ಮಸೂದೆಯನ್ನು ರಾಜ್ಯಸಭೆಯಲ್ಲಿ ಸೆ.20 ರಂದು ಅಂಗೀಕರಿಸಲಾಗಿದೆ.
ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಮಸೂದೆಯನ್ನು ವಿರೋಧಿಸಿ ತೀವ್ರ ಪ್ರತಿಭಟನೆ ನಡೆಸಿದವು, ಪ್ರತಿಭಟನೆಯ ನಡುವೆಯೇ ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಗಿದೆ. ಪ್ರತಿಪಕ್ಷಗಳ ಗದ್ದಲದ ಹಿನ್ನೆಲೆಯಲ್ಲಿ ರಾಜ್ಯಸಭೆಯ ಕಲಾಪವನ್ನು ಸೋಮವಾರ ಬೆಳಿಗ್ಗೆ 9 ಗಂಟೆವರೆಗೆ ಮುಂದೂಡಲಾಗಿದೆ.
ಈ ಮಸೂದೆಗಳನ್ನು ರೈತರ ಡೆತ್ ವಾರೆಂಟ್, ಅದಕ್ಕೆ ಸಹಿ ಹಾಕುವುದಿಲ್ಲ ಎಂದು ಕಾಂಗ್ರೆಸ್ ಹೇಳಿದ್ದರೆ, ದೇಶದ ಒಟ್ಟು ಜಿಡಿಪಿಗೆ ಕನಿಷ್ಠ 20% ಕೊಡುಗೆ ನೀಡುವ ರೈತರನ್ನು ಈ ಮಸೂದೆಗಳು ಗುಲಾಮರನ್ನಾಗಿ ಮಾಡುತ್ತವೆ ಎಂದು ಡಿಎಂಕೆ ಪಕ್ಷ ಹೇಳಿದೆ.