ಕಾಸರಗೋಡು: ದಾಖಲೆ ಪತ್ರಗಳಿಲ್ಲದೆ ಅಕ್ರಮವಾಗಿ ಹಾದಿಬದಿ ವ್ಯಾಪಾರ ನಡೆಸಿದರೆ 3 ರಿಂದ 5 ಲಕ್ಷ ರೂ. ವರೆಗೆ ದಂಡ, 6 ತಿಂಗಳ ಸಜೆ ವಿಧಿಸಲಾಗುವುದು ಎಂದು ಆಹಾರ ಸುರಕ್ಷಾ ಅಧಿಕಾರಿಗಳು ತಿಳಿಸಿದರು. ಆಹಾರ ಸುರಕ್ಷಾ ಕಾಯಿದೆ 2006 ಪ್ರಕಾರ ಈ ಕ್ರಮ ಕೈಗೊಳ್ಳಲಾಗುವುದು.
ಆಹಾರ ಉತ್ಪನ್ನಗಳ ಮಾರಾಟ ನಡೆಸಲು ಪರವಾನಗಿ, ಆಹಾರ ಸಾಮಾಗ್ರಿ ಖರೀದಿಸಿದ ಸಂಬಂಧ ಬಿಲ್, ಪ್ರಯೋಗಾಲಯ ತಪಾಸಣೆಯ ವರದಿ ಇತ್ಯಾದಿಗಳಿದ್ದರೆ ಮಾತ್ರ ಮಾರಾಟ ನಡೆಸಬಹುದು. ಪರವಾನಗಿ ಇಲ್ಲದೆ ಮಾರಾಟ ನಡೆಸಕೂಡದು ಎಂದು ಆಹಾರ ಸುರಕ್ಷಾ ಇಲಾಖೆ ಸಿಬ್ಬಂದಿ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ ಬದಿಯ ಹೋಟೆಲ್ ಗಳಲ್ಲಿ ಕುಳಿತು ಆಹಾರ ಸೇವನೆ ಸಲ್ಲದು. ಪಾರ್ಸೆಲ್ ರೂಪದಲ್ಲಿ ಆಹಾರ ವಿತರಣೆ ನಡೆಸಬಹುದು ಎಂದು ತಿಳಿಸಲಾಗಿದೆ.
ಯಾವ ಆದೇಶಗಳನ್ನೂ ಪಾಲಿಸಿದೆ ಕಾಸರಗೋಡು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66, ಕೆ.ಎಸ್.ಟಿ.ಪಿ. ರಸ್ತೆ, ರಾಜ್ಯ ಹೆದ್ದಾರಿ ಸಹಿತ ಪ್ರಧಾನ ರಸ್ತೆ ಬದಿ ಆಹಾರ ಉತ್ಪನ್ನಗಳನ್ನು, ಗೇರುಬೀಜ, ತರಕಾರಿ ಇತ್ಯಾದಿ ಮಾರಾಟ ನಡೆಸುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆಹಾರ ಸುರಕ್ಷಾ ದಳದ ತಪಾಸಣೆ ಚುರುಕುಗೊಳಿಸಲಾಗಿದೆ. ಆಹಾರ ಸುರಕ್ಷಾ ಇಲಾಖೆ ಸಹಾಯಕ ಕಮೀಷನರ್ ಉದಯನ್ ಅವರ ನೇತೃತ್ವದಲ್ಲಿ ಫುಡ್ ಸೇಫ್ಟಿ ಅಧಿಕಾರಿಗಳಾದ ಕೆ.ಪಿ.ಮುಸ್ತಫಾ, ಮುಹಮ್ಮದ್ ಅರಾಫತ್ ಅವರು ಸೇಋಇರುವ ತಂಡ ವಿವಿಧೆಡೆ ತಪಾಸಣೆ ನಡೆಸಿದೆ. ಈ ಸಂದರ್ಭ ವಶಪಡಿಸಲಾದ ಗೇರುಬೀಜವನ್ನು ತಪಾಸಣೆಗೆ ಕಳುಹಿಸಲಾಗಿದೆ.
ಮುಂದಿನ ದಿನಗಳಲ್ಲೂ ತಪಾಸಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದರು. ತಪಾಸಣೆಯ ಮೊದಲ ಹಂತವಾಗಿ ಜನಜಾಗೃತಿ ಮೂಡಿಸುವ ಯತ್ನ ನಡೆಸಲಾಗುವುದು. ನಂತರವೂ ಇದೇ ರೀತಿ ಅಕ್ರಮ ವ್ಯಾಪಾರ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
www.fssai.gov.in ಎಂಬ ವೆಬ್ ಸೈಟ್ ನಲ್ಲಿ ನೂರು ರೂ. ಶುಲ್ಕ ಪಾವತಿಸಿ ನೋಂದಣಿ ನಡೆಸಬಹುದಾಗಿದೆ. ಅಕ್ಷಯ ಕೇಂದ್ರಗಳಲ್ಲಿ ಆನ್ ಲೈನ್ ಮೂಲಕ ಪರವಾನಗಿಗೆ ಅರ್ಜಿ ಸಲ್ಲಿಸಬಹುದು.