ಕೋಲ್ಕತಾ: ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರ ರಾಜ್ಯದಲ್ಲಿ ಸೆಪ್ಟೆಂಬರ್ 30ರ ವರೆಗೆ ಲಾಕ್ ಡೌನ್ ವಿಸ್ತರಿಸಿ ಸೋಮವಾರ ಆದೇಶ ಹೊರಡಿಸಿದೆ.
ರಾಜ್ಯದ ಕಂಟೈನ್ ಮೆಂಟ್ ಜೋನ್ ಗಳಲ್ಲಿ ಸೆಪ್ಟೆಂಬರ್ 30ರ ವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದೆ ಮತ್ತು ಸೆಪ್ಟೆಂಬರ್ 7, 11 ಹಾಗೂ 12ರಂದು ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಜೀವ್ ಸಿನ್ಹಾ ಅವರು ತಿಳಿಸಿದ್ದಾರೆ.
ಶಾಲಾ ಕಾಲೇಜ್, ಚಿತ್ರಮಂದಿರಗಳು, ಸ್ವಿಮ್ಮಿಂಗ್ ಫೂಲ್ ಗಳು ಮತ್ತು ಪಾರ್ಕ್ ಗಳನ್ನು ಸೆಪ್ಟೆಂಬರ್ 30ರ ವರೆಗೆ ಬಂದ್ ಮಾಡಲಾಗಿದೆ. ಕೆಲವು ನಿರ್ಬಂಧಗಳೊಂದಿಗೆ ಕಂಟೈನ್ ಮೆಂಟ್ ಜೋನ್ ಹೊರತುಪಡಿಸಿ ಉಳಿದ ಕಡೆ ಮೆಟ್ರೋ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ರಾಜ್ಯಾದ್ಯಂತ ಎಲ್ಲಾ ಸರ್ಕಾರ, ಅನುದಾನಿತ ಮತ್ತು ಖಾಸಗಿ ಶಾಲೆಗಳು, ಕಾಲೇಜ್ ಗಳು ಹಾಗೂ ವಿಶ್ವವಿದ್ಯಾಲಯಗಳ ಎಲ್ಲಾ ತರಗತಿಗಳನ್ನು ಸೆಪ್ಟೆಂಬರ್ 30ರ ವರೆಗೆ ಬಂದ್ ಮಾಡಲಾಗುತ್ತಿದೆ ಎಂದು ಸಿನ್ಹಾ ತಿಳಿಸಿದ್ದಾರೆ.