ಕಾಸರಗೋಡು: ಕೋವಿಡ್ ಸೋಂಕಿನ ನಡುವೆ ಕಲ್ಯಾಣ ನಿಧಿ ಮಂಡಳಿ ಸಾಂತ್ವನ ಸ್ಪರ್ಶ ನೀಡುತ್ತಿದೆ.
ಕಾಸರಗೋಡು ಜಿಲ್ಲೆಯಲ್ಲಿ ಮಂಡಳಿ ವತಿಯಿಂದ ಕಾರ್ಮಿಕರಿಗೆ 41.69 ಲಕ್ಷ ರೂ. ವಿತರಣೆ ನಡೆಸಲಾಗಿದೆ. ಏಪ್ರಿಲ್ ತಿಂಗಳಿಂದ ಆ.15 ವರೆಗಿನ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕೇರಳ ಶಾಪ್ಸ್ ಆಂಡ್ ಕಮರ್ಶಿಯಲ್ ಎಸ್ಟಾಬ್ಲಿಷ್ ಮೆಂಟ್ ವರ್ಕರ್ಸ್ ವೆಲ್ ಫೇರ್ ಫಂಡ್ ಬೋರ್ಡ್ ಈ ನಿಧಿ ವಿತರಣೆ ನಡೆಸಿದೆ.
ಕಲ್ಯಾಣ ನಿಧಿ ಕಾರ್ಮಿಕರಿಗೆ ಕೋವಿಡ್ ಹಿನ್ನೆಲೆಯನ್ನು ಪರಿಶೀಲಿಸಿ ತಲಾ ಒಂದು ಸಾವಿರ ರೂ., ಕ್ವಾರೆಂಟೈನ್ ಪ್ರವೇಶಿಸಿರುವ ಮಂದಿಗೆ ತಲಾ 5 ಸಾವಿರ ರೂ., ಕೋವಿಡ್ ಖಚಿತಗೊಂಡವರಿಗೆ 10 ಸಾವಿರ ರೂ. ನೀಡಲಾಗುತ್ತಿದೆ ಎಂದು ಮಂಡಳಿಯ ಕಾರ್ಯಕಾರಿ ಅಧಿಕಾರಿ ವಿ.ಅಬ್ದುಲ್ ಸಲಾಂ ತಿಳಿಸಿದರು. ಪೂರ್ಣ ರೂಪದಲ್ಲಿ ಕಂಪ್ಯೂಟರೀಕೃತ ರಾಜ್ಯದ ಏಕೈಕ ಮಂಡಳಿ ಎಂಬ ನಿಟ್ಟಿನಲ್ಲಿ ವಿಳಂಬವಿಲ್ಲದೆ ಸದಸ್ಯರ ಬ್ಯಾಂಕ್ ಖಾತೆಗೆ ಈ ಮೊಬಲಗು ಪಾವತಿಸಲಾಗುವುದು ಎಂದು ಅವರು ಹೇಳಿದರು.
ಕಾಸರಗೋಡು ಜಿಲ್ಲೆಯಲ್ಲಿ 20,866 ಮಂದಿ ಸದಸ್ಯರು:
ಕಾರ್ಮಿಕ ಕಲ್ಯಾಣ ನಿಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 20.866 ಮಂದಿ ಸದಸ್ಯತ್ವ ಪಡೆದಿದ್ದಾರೆ. ಇವರಲ್ಲಿ ಗೂಂಡಂಗಡಿ ನಡೆಸುತ್ತಿರುವವರಿಂದ ಹಿಡಿದು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಕಾರ್ಮಿಕರು ಇದ್ದಾರೆ. 18 ವರ್ಷಕ್ಕಿಂತ ಅಧಿಕ ವಯೋಮಾನದ 55 ವರ್ಷ ಮೀರದ ಮಂದಿ ಸದಸ್ಯತನ ಪಡೆಯಬಹುದು. ವ್ಯಾಪಾರ ಸಂಸ್ಥೆಗಳು, ಬೇಕರಿ, ಹಾದಿಬದಿ ವ್ಯಾಪಾರ, ಮೆಡಿಕಲ್ ಸ್ಟೋರ್, ಹೋಟೆಲ್, ಸ್ಟುಡಿಯೋ, ಜುವೆಲ್ಲರಿ, ಬುಕ್ ಹೌಸ್, ಲಾಡ್ಜ್, ಹಾಸ್ಟೆಲ್, ಮಾಧ್ಯಮಗಳು, ಹಣಕಾಸು ಸಮಸ್ಥೆಗಳು, ಬಟ್ಟೆ ಅಂಗಡಿಗಳು, ಪ್ರಯೋಗಾಲಯಗಳು, ಟ್ರಾವೆಲಿಂಗ್ ಸಂಸ್ಥೆಗಳು ಸಹಿತ 51 ವಿಧದ ಸಂಸ್ಥೆಗಳ ಕಾರ್ಮಿಕರು ಕಲ್ಯಾಣನಿಧಿಯ ವ್ಯಾಪ್ತಿಗೆ ಬರುತ್ತಾರೆ. ಈ ಸಂಸ್ಥೆಗಳಲ್ಲಿ ದುಡಿಯುವ ಯಾ ಸ್ವ ಉದ್ಯೋಗಿಗಳು ಸದಸ್ಯತನ ಪಡೆಯಬಹುದು. ಈ ಸಂಸ್ಥೆಗಳಲ್ಲಿ ಮೂರು ತಿಂಗಳ ತಮ್ಮ ಸೇವಾ ಅವಧಿ ಪೂರ್ಣಗೊಳಿಸುತ್ತಿರುವಂತೆಯೇ ಕಲ್ಯಾಣನಿಧಿಯ ಸದಸ್ಯತ್ವ ಪಡೆಯಬಹುದು.
1960ರ ಕೇರಳ ಶಾಪ್ಸ್ ಆಂಡ್ ಕಮರ್ಶಿಯಲ್ ಎಸ್ಟಾಬ್ಲಿಷ್ ಮೆಂಟಿಸ್ ಕಾಯಿದೆ ವ್ಯಾಪ್ತಿಯಲ್ಲಿ ಬರುವ ಕಾರ್ಮಿಕರು ಮತ್ತು ಸ್ವ ಉದ್ಯೋಗ ನಡೆಸುವ ಮಂದಿಗೆ ಸಹಾಯ, ಅವರ ಕಲ್ಯಾಣ, ಪಿಂಚಣಿ ಒದಗಿಸುವ ನಿಟ್ಟಿನಲ್ಲಿ ರಚಿಸಿದ ಯೋಜನೆಯೇ ಕೇರಳ ಶಾಪ್ಸ್ ಆಂಡ್ ಕಮರ್ಶಿಯಲ್ ಎಸ್ಟಾಬ್ಲಿಷ್ ಮೆಂಟಿಸ್ ಕಾರ್ಮಿಕ ಕಲ್ಯಾಣ ಯೋಜನೆ. 2007 ಮಾರ್ಚ್ ನಲ್ಲಿ ಈ ಯೋಜನೆ ಆರಂಭಗೊಂಡಿತ್ತು. ರಾಜ್ಯದಲ್ಲಿ ಈ ಕೋವಿಡ್ ಕಾಲದಲ್ಲಿ ಕಲ್ಯಾಣನಿಧಿ ಮೂಲಕ 51.10 ಕೋಟಿ ರೂ. ಕಾರ್ಮಿಕರಿಗೆ ಈ ವರೆಗೆ ವಿತರಣೆ ನಡೆಸಲಾಗಿದೆ.
ಕಾರ್ಮಿಕರ ಕಲ್ಯಾಣನಿಧಿ: ಪ್ರತಿ ತಿಂಗಳು ಸಲ್ಲಿಸಬೇಕಿರುವುದು ಕೇವಲ 20 ರೂ.: ಪ್ರತಿಫಲ ರೂಪದಲ್ಲಿ ಲಭಿಸುವ ಸೌಲಭ್ಯಗಳು ಅನೇಕ
ಕಾಸರಗೋಡು, ಸೆ.17: ಕಾರ್ಮಿಕರ ಕಲ್ಯಾಣನಿಧಿ ಮಂಡಳಿ ದುಡಿಯುವ ವರ್ಗಕ್ಕೆ ವರದಾನವಾಗಿದೆ. ಇಲ್ಲಿ ಕಾರ್ಮಿಕರು ಪ್ರತಿ ತಿಂಗಳು ಸಲ್ಲಿಸಬೇಕಿರುವುದು ಕೇವಲ 20 ರೂ., ಪ್ರತಿಫಲ ರೂಪದಲ್ಲಿ ಲಭಿಸುವ ಸೌಲಭ್ಯಗಳು ಅನೇಕ.
ಈ ಕಾರಣದಿಂದ ಕೇರಳ ಶಾಪ್ಸ್ ಆಂಡ್ ಕಮರ್ಶಿಯಲ್ ಎಸ್ಟಾಬ್ಲಿಷ್ ಮೆಂಟೀಸ್ ಕಾರ್ಮಿಕರ ಕಲ್ಯಾಣ ಯೋಜನೆಗೆ ಜನಮನ್ನಣೆ ಅಧಿಕಗೊಳ್ಳುತ್ತಿದೆ. ಸೌಲಭ್ಯಗಳೂ ಸುಧಾರಿತ ಕ್ರಮದಲ್ಲೇ ಯಥಾಸಮಯಕ್ಕೆ ಲಭಿಸುತ್ತಿರುವ ಹಿನ್ನೆಲೆಯಲ್ಲಿ ಸದಸ್ಯತನ ಪಡೆಯುವವರ ಸಂಖ್ಯೆಯೂ ಕಾಲಕಾಲಕ್ಕೆ ಅಧಿಕಗೊಳ್ಳುತ್ತಿದೆ ಎಂದು ಮಂಡಳಿಯ ಜಿಲ್ಲಾ ಕಾರ್ಯಕಾರಿ ಅಧಿಕಾರಿ ವಿ.ಅಬ್ದುಲ್ ಸಲಾಂ ತಿಳಿಸಿದರು.
ಸದಸ್ಯತನ ಪಡೆಯಲು ಕಷ್ಟವಿಲ್ಲ:
ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸದಸ್ಯತನ ಪಡೆಯುವ ಮಾರ್ಗ ಸುಲಭವಾಗಿದೆ. ಎಂಬ ವೆಬ್ ಸಐಟ್ ಮೂಲಕ ಸದಸ್ಯತನ, ನೋಂದಣಿ, ಸೌಲಭ್ಯ ಇತ್ಯಾದಿ ಅರ್ಜಿಗಳು ಲಭ್ಯವಿವೆ. ವೆಬ್ ಸೈಟ್ ನಿಂದ ಡೌನ್ ಲೋಡ್ ನಡೆಸಿದ ಅರ್ಜಿಯನ್ನು ಭರ್ತಿಗೊಳಿಸಿ ಕಲ್ಯಾಣ ನಿಧಿ ಮಂಡಳಿಯ ಕಾರ್ಯಕಾರಿ ಅಧಿಕಾರಿಗೆ ಸಲ್ಲಿಸಬೇಕು. ಅಗತ್ಯದ ತಪಾಸಣೆ ನಡೆಸಿ ಸದಸ್ಯತನವನ್ನು ಅವರು ನೀಡಲಿದ್ದಾರೆ.
ಕಾರ್ಮಿಕರ ಕಂತು 20 ರೂ.:
ಪ್ರತಿ ಸದಸ್ಯ ಪ್ರತಿ ತಿಂಗಳು ತಲಾ 20 ರೂ. ಮಂಡಳಿಗೆ ಪಾವತಿಸಿದರೆ ಸಾಕು. ಸ್ವ ಉದ್ಯೋಗ ನಡೆಸುವವರು ತಾವು 20 ರೂ., ಕಾರ್ಮಿಕ ಕಂತು ರೂಪದಲ್ಲಿ 20 ರೂ. ನಂತೆ 40 ರೂ. ಪಾವತಿಸಬೇಕು. ಒಬ್ಬ ನೌಕರಿ ಮಾಲೀಕ ಯಾ ಸ್ವ ಉದ್ಯೋಗ ನಡೆಸುವ ಸದಸ್ಯ 6 ತಿಂಗಳಿಗೊಮ್ಮೆ ಯಾ ವರ್ಷಕ್ಕೊಮ್ಮೆ ಏಕಕಾಲಕ್ಕೆ ಮೊಬಲಗು ಪಾವತಿಸುವ ಸೌಲಭ್ಯವೂ ಇದೆ. ಹತ್ತು ವರ್ಷ ವರೆಗೆ ಸತತ ಶುಲ್ಕ ಪಾವತಿಸಿದವರಿಗೆ ಪಿಂಚಣಿಯೂ ಲಭಿಸಲಿದೆ. ಹತ್ತು ವರ್ಷಕ್ಕೆ ಮುನ್ನ ಈ ಪಾವತಿ ನಿಲುಗಡೆ ನಡೆಸಿದರೆ 60 ವರ್ಷ ಪ್ರಾಯ ಪೂರ್ತಿಗೊಳ್ಳುವ ವೇಳೆ ಪಾವತಿಸಿದ ಪೂರ್ಣ ಮೊಬಲಗು ಮರಳಿ ಲಭಿಸಲಿದೆ.
ಸೌಲಭ್ಯಗಳು ಅನೇಕ:
ಪಿಂಚಣಿ : ಹತ್ತು ವರ್ಷ ಕಾಲ ಸತತವಾಗಿ ಕಂತು ಪಾವತಿ ನಡೆಸಿದವರಿಗೆ 60 ವರ್ಷ ಪೂರ್ಣಗೊಂಡರೆ, ಶಾಶ್ವತ ವಿಕಲ ಚೇತನತೆ ಸಂಭವಿಸಿ, ಸತತ 2 ವರ್ಷಗಳಿಂದ ಉದ್ಯೋಗಕ್ಕೆ ತೆರಳಲಾಗದೇ ಇದ್ದಲ್ಲಿ, ಪಿಂಚಣಿಗೆ ಅರ್ಹರಾಗುತ್ತಾರೆ. ಒಂದೇ ಸಂಸ್ಥೆಯಲ್ಲಿ ದುಡಿಮೆ ನಡೆಸಬೇಕಿಲ್ಲ. ಬೇರೆ ಸಂಸ್ಥೆಯಲ್ಲಿ ದುಡಿಮೆ ಬದಲಿಸಿದರೂ, ಸತತ ಹತ್ತು ವರ್ಷ ಕಂತು ಪಾವತಿಸಿದರೆ ಪಿಂಚಣಿಗೆ ಅರ್ಹರಾಗುತ್ತಾರೆ.
ಕುಟುಂಬ ಪಿಂಚಣಿ : ಕನಿಷ್ಠ 15 ವರ್ಷ ಕಂತು ಪಾವತಿಸಿದ ಒಬ್ಬ ಸದಸ್ಯ, ಈ ಯೋಜನೆ ಪ್ರಕಾರ ಪಿಂಚಣಿಗೆ ಅರ್ಹ ವ್ಯಕ್ತಿ ಮೃತಪಟ್ಟರೆ ಅವರ ಕುಟುಂಬಕ್ಕೆ ಪಿಂಚಣಿ ಲಭಿಸಲಿದೆ.
ಹೆರಿಗೆ ಸೌಲಭ್ಯ: ಕನಿಷ್ಠ ಒಂದು ವರ್ಷ ಕಂತು ಪಾವತಿಸಿದ ಮತ್ತು ಎಂಪ್ಲಾಯೀಸ್ ಸ್ಟೇಟ್ ಇನ್ಶೂರೆನ್ಸ್ ಯೋಜನೆಯ ವ್ಯಾಪ್ತಿಯಲಲಿ ಇಲ್ಲದೇ ಇರುವ ಒಬ್ಬ ಮಹಿಳಾ ಸದಸ್ಯೆಗೆ ಹೆರಿಗೆ ರಜೆಗೆ ತೆರಳಿದ ದಿನಂದಿಂದ ಮರಳಿ ನೌಕರಿಗೆ ಪ್ರವೇಶಿಸುವ ವರೆಗೆ ಗರಿಷ್ಠ 3 ತಿಂಗಳ ವೇತನ ಯಾ 15 ಸಾವಿರ ರೂ. ಲಭಿಸಲಿದೆ. ಗರ್ಭಪಾತ ಸಂಭವಿಸಿದಲ್ಲಿ ಸದಸ್ಯೆ ರಜೆಗೆ ತೆರಳುವ ದಿನದಿಂದ ಮರಳಿ ನೌಕರಿಗೆ ಹಾಜರಾಗುವ ದಿನ ವರೆಗೆ ಗರಿಷ್ಠ 6 ತಿಂಗಳ ವೇತನ ಯಾ ಅವರ ಹುದ್ದೆಗೆ ಅರ್ಹವಾದ ನಿಗದಿತ ವೇತನ ಲಭಿಸಲಿದೆ. ಆದರೆ ಈ ಸೌಲಭ್ಯ ಗರಿಷ್ಠ 2 ಬಾರಿ ಲಭಿಸಲಿದೆ. ನಂತರ ಸಿಗಲಾರದು.
ವಿವಾಹ ಸೌಲಭ್ಯ : ಕನಿಷ್ಠ 3 ವರ್ಷ ಕಂತು ಪಾವತಿಸಿದ ಸದಸ್ಯರ ಪ್ರಾಯಪ್ರಬುದ್ಧ ಹೆಣ್ಣುಮಕ್ಕಳ ಯಾ ಮಹಿಳಾ ಸದಸ್ಯರ ವಿವಾಹಕ್ಕೆ 5 ಸಾವಿರ ರೂ. ಆರ್ಥಿಕ ಸೌಲಭ್ಯ ಲಭಿಸಲಿದೆ. ಈ ಸೌಲಭ್ಯ ಗರಿಷ್ಠ 2 ಬಾರಿ ಮಾತ್ರ ಲಭಿಸಲಿದೆ.
ಮರಣ ಸಂಬಂಧ ಸಹಾಯ : ಮಂಡಳಿಯ ಸದಸ್ಯರ ಮೃತಪಟ್ಟಲ್ಲಿ, ಯಾ ಅಪಘಾತಕ್ಕೆ ಬಲಿಯಾದಲ್ಲಿ ಮೊದಲ 3 ವರ್ಷ ದ ಅವಧಿಯಲ್ಲಿ 5 ಸಾವಿರ ರೂ., ನಂತರ ವರ್ಷಕ್ಕೆ ಒಂದು ಸಾವಿರ ರೂ.ನಂತೆ ಗಣನೆ ಮಾಡಿ ಗರಿಷ್ಠ 20 ಸಾವಿರ ರೂ.ನ ಮರಣ ಸಂಬಂಧ ಸಹಾಯ ಲಭಿಸಲಿದೆ.
ಮರಣಾನಂತರದ ಕ್ರಮಕ್ಕೆ ಸಹಾಯ : ಕನಿಷ್ಠ 3 ವರ್ಷ ಮಂಡಳಿಗೆ ಶುಲ್ಕ ಪಾವತಿಸಿದರುವ ಸದಸ್ಯ ಯಾ ಕುಟುಂಬದ ಸದಸ್ಯರು ಮೃತಪಟ್ಟರೆ, ಮರಣೋತ್ತರ ಕ್ರಮಗಳಿಗೆ ಸಹಾಯ ರೂಪದಲ್ಲಿ ತಲಾ ಒಂದು ಸಾವಿರ ರೂ. ಸಹಾಯ ಲಭಿಸಲಿದೆ.
ಚಿಕಿತ್ಸಾ ಸಹಾಯ: ಕನಿಷ್ಠ 3 ವರ್ಷ ಕಂತು ಸತತವಾಗಿ ಪಾವತಿಸಿದ ಸದಸ್ಯ ಯಾ ಕುಟುಂಬದ ಸದಸ್ಯರಿಗೆ ಚಿಕಿತ್ಸೆಗೆ ಸದಸ್ಯತನದ ಕಾಲಾವಧಿಯಲ್ಲಿ ಗರಿಷ್ಠ 10 ಸಾವಿರ ರೂ. ಮಂಡಳಿಯ ಅಂಗೀಕಾರ ಅನ್ವಯ ಚಿಕಿತ್ಸಾ ಸಹಾಯ ಲಭಿಸಲಿದೆ.
ಶಿಕ್ಷಣ ಸೌಲಭ್ಯ: ಕನಿಷ್ಠ ಒಂದು ವರ್ಷ ಮಂಡಳಿಗೆ ಕಂತು ಪಾವತಿಸಿದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಮಂಡಳಿಯಿಂದ ಶಿಕ್ಷಣಕ್ಕೆ ಸಹಾಯ ಸೌಲಭ್ಯ ಲಭಿಸಲಿದೆ. ಶಿಕ್ಷಣ ಸೌಲಭ್ಯ ಮಂಡಳಿ ಈ ಸಂಬಂಧ ಯೋಜನೆ ರಚಿಸಿ ಸರಕಾರಕ್ಕೆ ಸಲ್ಲಿಸಿ ಅನುಮತಿ ಲಭಿಸಿದ ತಕ್ಷಣ ಸೌಲಭ್ಯ ದೊರೆಯಲಿದೆ.