ಇಡುಕ್ಕಿ ಜಿಲ್ಲೆಯ ಮುನ್ನಾರ್ ನ ರಾಜಮಲಾದ ಪೆಟ್ಟಿಮುಡಿ ಬೆಟ್ಟ ಕುಸಿದು, ಸುಮಾರು 70 ಮಂದಿ ಸಜೀವ ಸಮಾಧಿಯಾದ ಭೀಕರ ದುರಂತ ನಡೆದು ಸುಮಾರು 46 ದಿನಗಳು ಕಳೆದಿವೆ. ಆಗಸ್ಟ್ 6ರಂದು ನಸುಕಿನಲ್ಲಿ ನಡೆದ ಬೆಟ್ಟ ಕುಸಿತದಲ್ಲಿ ಅದೆಷ್ಟೋ ಜನ ತಂದೆ-ತಾಯಿಯನ್ನು ಕಳೆದುಕೊಂಡಿದ್ದಾರೆ. ಮಕ್ಕಳನ್ನು ಕಳೆದುಕೊಂಡವರು ಇದ್ದಾರೆ.
ಸ್ಥಳೀಯ ಆಡಳಿತ ನೀಡಿದ ಮಾಹಿತಿಯ ಪ್ರಕಾರ ಸುಮಾರು 70 ಮಂದಿ ಈ ಭೂಕುಸಿತದಲ್ಲಿ ನಾಪತ್ತೆಯಾಗಿದ್ದಾರೆ. ಆದರೆ ರಕ್ಷಣಾ ತಂಡಕ್ಕೆ ಇದುವರೆಗೆ 66 ಮೃತದೇಹಗಳನ್ನು ಮಾತ್ರ ಮಣ್ಣಿನಡಿಯಿಂದ ಹೊರತೆಗೆಯಲು ಸಾಧ್ಯವಾಗಿದೆ.
ಹೀಗಿರುವಾಗ ಇಲ್ಲೋರ್ವ ತಂದೆ ತನ್ನ 22 ವರ್ಷದ ಮಗನ ಮೃತದೇಹಕ್ಕಾಗಿ ಪ್ರತಿದಿನ ಭೂಕುಸಿತ ಉಂಟಾದ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.ಇದೊಂದು ಮನಕಲಕುವ ಘಟನೆ. ಷಣ್ಮುಗನಾಥನ್ ಎಂಬುವರು ಕಳೆದ 45 ದಿನಗಳಿಂದ ಪ್ರತಿದಿನ ಪೆಟ್ಟಿಮುಡಿ ಬಳಿ ತೆರಳುತ್ತಿದ್ದಾರೆ. 22 ವರ್ಷದ ಮಗ ದಿನೇಶ್ಕುಮಾರ್ನನ್ನು ಇಲ್ಲಿಯೇ ಕಳೆದುಕೊಂಡಿರುವ ಅವರಿಗೆ ಆತನ ಶವ ಸಿಕ್ಕಿಲ್ಲ. ಅದನ್ನು ಹುಡುಕಲು ದಿನವೂ ಇಲ್ಲಿಗೆ ಬರುತ್ತಿದ್ದಾರೆ.
ಷಣ್ಮುಗಂ ಅವರ ಮನೆ ಇರುವುದು ಮುನ್ನಾರ್ನಲ್ಲಿ. ಇಲ್ಲಿಂದ 23 ಕಿ.ಮೀ.ದೂರದಲ್ಲಿರುವ ಪೆಟ್ಟುಮುಡಿಗೆ ದಿನವೂ ಒಂದು ಆಸೆ ಇಟ್ಟುಕೊಂಡು ಹೋಗುತ್ತಿದ್ದಾರೆ. ನನ್ನ ಮಗ ಈ ಕಲ್ಲುಮಣ್ಣುಗಳ ಅಡಿಯಲ್ಲಿ ನೆಮ್ಮದಿಯಾಗಿ ಮಲಗಿದ್ದಾನೆ. ನನಗೆ ಆತನ ಶವ ಒಂದಲ್ಲ ಒಂದು ದಿನ ಸಿಗಬಹುದು ಎಂಬ ನಂಬಿಕೆ ಇದೆ ಎಂದು ನೋವಿನಿಂದ ನುಡಿಯುತ್ತಾರೆ. 2021ರ ಜನವರಿಯವರೆಗೂ ಪ್ರತಿದಿನವೂ ಇಲ್ಲಿಗೆ ಬಂದು, ಪುತ್ರನ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತೇನೆ ಎಂದೂ ತಿಳಿಸಿದ್ದಾರೆ.
ನನ್ನ ಮಗ ಇಲ್ಲಿಯೇ ಮೃತಪಟ್ಟಿದ್ದಾನೆ. 40 ದಿನಗಳ ಮೇಲಾದರೂ ಅವನ ಅಂತ್ಯಕ್ರಿಯೆ ಮಾಡಲಾಗದೆ ಮನಸಿಗೆಲ್ಲ ಕಸಿವಿಸಿ ಉಂಟಾಗುತ್ತಿದೆ. ರಾತ್ರಿ ನಿದ್ದೆ ಮಾಡಲೂ ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಷಣ್ಮುಗನಾಥನ್ ಅವರ ಮೊದಲ ಮಗ ದಿನೇಶ್ ಕುಮಾರ್ ಅಷ್ಟೇ ಅಲ್ಲದೆ, ಎರಡನೇ ಪುತ್ರ ನಿತೀಶ್ ಕುಮಾರ್ (19) ಕೂಡ ಈ ಪೆಟ್ಟುಮುಡಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಷಣ್ಮುಗನಾಥನ್ ಅವರಿಗೆ ಮೂವರು ಮಕ್ಕಳು. ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ. ಇವರು ಪೆಟ್ಟುಮುಡಿ ನಿವಾಸಿಗಳಲ್ಲ. ಕೇರಳದ ಗ್ರಾಮೀಣ ಬ್ಯಾಂಕ್ನಲ್ಲಿ ಕ್ಯಾಶಿಯರ್ ಆಗಿರುವ ಇವರ ಕುಟುಂಬ ಮುನ್ನಾರ್ನ ಎಂ.ಜಿ. ಕಾಲನಿಯಲ್ಲಿ ವಾಸವಾಗಿದೆ. ಆದರೆ ಆಗಸ್ಟ್ ನಾಲ್ಕರಂದು ದಿನೇಶ್ ಹಾಗೂ ನಿತೀಶ್ ಇಬ್ಬರೂ ಅವರ ಕಸಿನ್ ಹುಟ್ಟುಹಬ್ಬದ ಪಾರ್ಟಿಗೆಂದು ಅಲ್ಲಿಗೆ ಹೋಗಿದ್ದರು. ಆಗಸ್ಟ್ 6ರಂದು ನಡೆದ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ನಿತೀಶ್ ಮೃತದೇಹ ಪತ್ತೆಯಾಗಿದ್ದು, ದಿನೇಶ್ ಶವ ಇನ್ನೂ ಸಿಕ್ಕಿಲ್ಲ. ಅದೇ ಕೊರಗಿನಲ್ಲಿ ಪ್ರತಿದಿನವೂ ಈ ಅಪ್ಪ ಇಲ್ಲಿಗೆ ಬರುತ್ತಿದ್ದಾರೆ.