ನವದೆಹಲಿ: ಲಡಾಖ್ ನ ಪ್ಯಾಂಗಾಂಗ್ ತ್ಸೋನ ಉತ್ತರ ದಂಡೆಯ ಫಿಂಗರ್ 4 ಪ್ರದೇಶವನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದ್ದು, ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯ ತನ್ನ ಸ್ಥಾನದಲ್ಲಿ ಮುಳ್ಳುತಂತಿ ಬೇಲಿ ಹಾಕುವ ಮೂಲಕ ಚೀನಾಗೆ ರೆಡ್ ಲೈನ್ ಫಿಕ್ಸ್ ಮಾಡಿದೆ.
ಇತ್ತೀಚಿಗೆ ಚೀನಾ ಈ ಪ್ರದೇಶವನ್ನು ವಶಕ್ಕೆ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿ ವಿಫಲವಾಗಿತ್ತು. ಅಲ್ಲದೇ ಚೀನಾ ಸೇನೆ ಉದ್ಧಟತನ ತೋರಿ ಪ್ರಚೋದನಕಾರಿ ವರ್ತನೆ ತೋರಿಸಿತ್ತು. ಆದರೆ ಚೀನಾಗೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತ ಪ್ಯಾಂಗಾಂಗ್ ತ್ಸೋ ಪ್ರದೇಶದ ಫಿಂಗರ್ 4 ಅನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ನಾವು ಈಗ ನಮ್ಮ ಸೈನಿಕರನ್ನು ಪಾಂಗೊಂಗ್ ತ್ಸೊದ ಉತ್ತರ ದಂಡೆಯಲ್ಲಿರುವ ಅತೀ ಎತ್ತರದ ಫಿಂಗರ್ 4ರ ಪ್ರದೇಶದಲ್ಲಿ ನಿಯೋಜಿಸಿದ್ದೇವೆ. ಇದರಿಂದ ಫಿಂಗರ್ 4 ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಚೀನಿಯರ ಪ್ರತಿ ಚಲನವಲನವನ್ನು ಭಾರತೀಯ ಸೇನೆ ಗಮನಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪ್ಯಾಂಗಾಂಗ್ ಸರೋವರದ ದಂಡೆ ಪ್ರದೇಶ ಭಾರತೀಯ ಸೇನೆಯ ವಶದಲ್ಲಿದೆ. ಈ ಪ್ರದೇಶದ ಎತ್ತರದ ಸ್ಥಳಗಳ ಮೇಲೆ ಭಾರತ ತನ್ನ ಹಿಡಿತ ಸಾಧಿಸಿದ್ದು, ಚೀನಾ ಯಾವುದೇ ರೀತಿಯ ಆಕ್ರಮಣಕ್ಕೆ ಮುಂದಾದರೂ ಕೂಡಾ ಅದನ್ನು ವಿಫಲಗೊಳಿಸಲಾಗುವುದು ಎಂದು ಸೇನಾ ಮೂಲಗಳು ತಿಳಿಸಿವೆ.