ಮಂಜೇಶ್ವರ: ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾ.23 ರಿಂದ ಸಂಪೂರ್ಣ ಮೊಟಕುಗೊಂಡ ಕಾಸರಗೋಡು ಮಂಗಳೂರು, ಕಾಸರಗೋಡು-ಸುಳ್ಯ, ಕಾಸರಗೋಡು-ಪುತ್ತೂರು, ಉಪ್ಪಳ-ಪುತ್ತೂರು, ವಿಟ್ಲ-ಬೇಡಗುಡ್ಡೆ ಅಂತರ್ ರಾಜ್ಯ ಬಸ್ ಸೇವೆಗಳು ಪ್ರಸ್ತುತ ಅನ್ ಲಾಕ್ 4 ರ ಕಾಲಾವಧಿಯಲ್ಲೂ ಪುನರಾರಂಭಗೊಳ್ಳದಿರುವುದು ಜನರಲ್ಲಿ ತೀವ್ರ ರೋಶಕ್ಕೆ ಕಾರಣವಾಗುತ್ತಿದೆ.
ಅಂತರ್ ರಾಜ್ಯ ಪ್ರಯಾಣ ನಿರ್ಬಂಧಗಳನ್ನು ಹಿಂಪಡೆಯಲಾಗಿದ್ದರೂ ಕಾಸರಗೋಡು ಜಿಲ್ಲೆಯಲ್ಲಿ ಮಾತ್ರ ಅಡೆತಡೆಗಳು ಹಾಗೆಯೇ ಮುಂದುವರಿಯುತ್ತಿದೆ. ರಾಜ್ಯದ ಇತರೆಡೆ ಸರ್ಕಾರಿ ಬಸ್ ಗಳು ಎರ್ನಾಕುಳಂನಿಂದ ಬೆಂಗಳೂರಿಗೆ ಸಂಚಾರ ಆರಂಭಿಸಿದೆ. ಮುಂಬೈನಿಂದ ತಿರುವನಂತಪುರಂ ಮತ್ತು ಎರ್ನಾಕುಳಂನಿಂದ ದೆಹಲಿಗೆ ನಿಯಮಿತವಾಗಿ ರೈಲುಗಳಿವೆ. ತಿರುವನಂತಪುರಂ ಮತ್ತು ಮಂಗಳೂರಿನಿಂದ ಚೆನ್ನೈಗೆ ಹೋಗುವ ರೈಲು ಸೋಮವಾರದಿಂದ ಆರಂಭಗೊಳ್ಳಲಿದೆ ಎಂದು ಅಧಿಕೃತ ಪ್ರಕಟಣೆಯೂ ಹೊರಬಿದ್ದಿದೆ. ನಿಬಂಧನೆಗಳಲ್ಲಿ ದೊಡ್ಡ ಬದಲಾವಣೆಗಳನ್ನು ತಂದಿದ್ದರೂ ಕಾಸರಗೋಡಿನ ಮಟ್ಟಿಗೆ ಈ ಹಿಂದಿನಂತೆಯೇ ಯಥಾಸ್ಥಿತಿ ಮುಂದುವರಿದಿದೆ.
ವೃದ್ಧರು, ಅಂಗವಿಕಲರು ಸೇರಿದಂತೆ ಜನರು ತಲಪ್ಪಾಡಿ ಗಡಿಯಲ್ಲಿ ಬಸ್ಸಿನಿಂದ ಇಳಿಯುವುದು, ಬಿಸಿಲು ಮತ್ತು ಮಳೆಯಲ್ಲಿ ಅರ್ಧ ಕಿಲೋಮೀಟರ್ ನಡೆದು ಮತ್ತೆ ಇನ್ನೊಂದು ಕಡೆಯಿಂದ ಬಸ್ಸಿಗೆ ಏರುವುದನ್ನು ನೋಡಿ ಅಧಿಕಾರಿಗಳು, ಜಿಲ್ಲಾಡಳಿತ ಸಂತೋಷಪಡುತ್ತಿವೆ, ಅಧಿಕಾರದ ಲಾಲಸೆ, ಅಹಂಕಾರ ಅವರಲ್ಲಿದೆ ಎಂದು ಆರೋಪಿಸಲಾಗಿದೆ.
ತಲಪ್ಪಾಡಿ ಗಡಿಯ ಮೂಲಕ ಅರ್ಧಕಿಲೋಮೀಟರ್ ಆಚೀಚೆ ನಡೆದು ತೆರಳುವಾಗ ಕೊರೊನಾ ಬಾರದೆಂದಾದರೆ ಬಸ್ ಸಂಚಾರ ಆರಂಭಿಸುವುದರಿಂದ ಹೇಗೆ ಕೊರೊನಾ ಬರುವುದೆಂದು ಸಾಮಾನ್ಯ ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಸರ್ಕಾರದ ಎಲ್ಲಾ ನಿಬಂಧನೆಗಳು ಜಾರಿಯಲ್ಲಿರುತ್ತ ಜಿಲ್ಲೆಯಲ್ಲಿ ಕೊರೊನಾದ ಆರ್ಭಟ ಏರುಗತಿಯಲ್ಲೇ ಇರುವುದರಿಂದ ಈಗಾಗಲೇ ವಿಧಿಸಿರುವ ನಿಬಂಧನೆಗಳಿಗೆ ಏನು ಅರ್ಥ ಎಂಬಂತೆ ಜನರು ಆಡಿಕೊಳ್ಳುತ್ತಿದ್ದು, ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ಅಧಿಕಾರದ ದರ್ಪ ತೋರಿಸುವ ಮಳೆಯಾಳಿ ಅಧಿಕಾರಿಗಳ ಕುತ್ಸಿತ ಮನೋಸ್ಥಿತಿ ಇದರ ಹಿಂದಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ಸಮರಸ ಸುದ್ದಿಯೊಂದಿಗೆ ಶನಿವಾರ ಮಧ್ಯಾಹ್ನ ಕಾಸರಗೋಡು ಕೆ.ಎಸ್.ಆರ್.ಟಿ.ಸಿ ಅಧಿಕೃತರನ್ನು ಸಂಪರ್ಕಿಸಿದ್ದು ಮೇಲಧಿಕಾರಿಗಳಿಂದ ಅಂತರ್ ರಾಜ್ಯ ಸಂಚಾರ ನಡೆಸಲು ಈವರೆಗೆ ಯಾವುದೇ ಆದೇಶ ಬಂದಿಲ್ಲ ಎಂದಷ್ಟೇ ತಿಳಿಸಿ ಸುಮ್ಮನಾಗಿದ್ದಾರೆ.