ನವದೆಹಲಿ: ಹಿಂದಿ, ಉರ್ದು, ಕಾಶ್ಮೀರಿ, ಡೋಗ್ರಿ ಮತ್ತು ಇಂಗ್ಲಿಷ್ ಅನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕೃತ ಭಾಷೆಗಳನ್ನಾಗಿ ಘೋಷಿಸಲಾಗುತ್ತದೆ. ಈ ಸಂಬಂಧ ಸಂಸತ್ತಿನಲ್ಲಿ ಮಸೂದೆ ತರಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಬುಧವಾರ ತಿಳಿಸಿದ್ದಾರೆ.
ಬುಧವಾರ ಇಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸಚಿವ ಜಾವಡೇಕರ್ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.
ಜಮ್ಮು ಮತ್ತು ಕಾಶ್ಮೀರದ ಅಧಿಕೃತ ಭಾಷಾ ವಿಭಾಗಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಅದರಲ್ಲಿ ಹಿಂದಿ, ಉರ್ದು, ಕಾಶ್ಮೀರಿ, ಡೋಗ್ರಿ ಮತ್ತು ಇಂಗ್ಲಿಷ್ ಎಂಬ ಐದು ಭಾಷೆಗಳಿವೆ ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ 2019ರ ಆಗಸ್ಟ್ 5ರಂದು ಹಿಂಪಡೆದುಕೊಂಡಿತ್ತು. ನಂತರ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಾಗಿದೆ.