ಕಾಸರಗೋಡು: 80ರ ಹರೆಯದ ಚಿಟ್ಟ ಅವರಿಗೆ ರಾಜ್ಯ ಸರಕಾರದ ವೃದ್ಧಾಪ್ಯ ಪಿಂಚಣಿ ಕೊಡುಗೆಯಾಗಿ ಲಭಿಸಿದೆ.
ಜಿಲ್ಲೆಯ ಬಳಾಲ್ ಗ್ರಾಮಪಂಚಾಯತ್ ನ ಪರಿಶಿಷ್ಟ ಪಂಗಡ ಕಾಲನಿಯ ಚಿಟ್ಟ ಎಂಬ ವಯೋವೃದ್ಧೆ ಗೆ ಈ ರೀತಿ ಪಿಂಚಣಿ ಮನೆಗೇ ತಲಪಿದೆ. ಮಕ್ಕಳು, ಮೊಮ್ಮಕ್ಕಳೊಂದಿಗೆ ಓಣ ಹಬ್ಬವನ್ನು ಮನಸಾರೆ ಆಚರಿಸಲು ಈ ಮೂಲಕ ಸಾಧ್ಯವಾಗಿದೆ ಎಂದವರು ಸಂತೃಪ್ತಿಯಿಂದ ನುಡಿಯುತ್ತಾರೆ.
ಈ ಪ್ರದೇಶದಲ್ಲಿ ಪ್ರಥಮ ಪಿಂಚಣಿ ಪಡೆದ ವಯೋವೃಧ್ಧರು ಇವರು ಎಂಬ ಹೆಗ್ಗಳಿಯೂ ಜತೆಗಿದೆ. 80ರ ಹರೆಯದಲ್ಲೂ ಚುರುಕುತನ ಕಳೆದುಕೊಳ್ಳದ ಈಕೆಯ ತಲೆಯಲ್ಲಿ ಬೆರಳೆಣಿಕೆಯ ಬಿಳಿಕೂದಲನ್ನು ಬಿಟ್ಟರೆ, ಕಪ್ಪುಕೂದಲೇ ಅಧಿಕವಾಗಿದೆ. ಯಾವ ರೋಗಬಾಧೆಯೂ ಇಲ್ಲದೆ, ಪೂರ್ಣ ಆರೋಗ್ಯ ವಂತರಾಗಿದ್ದಾರೆ. ಊರಲ್ಲಿ ಕೋವಿಡ್ ಸೋಂಕಿನ ಕರಾಳತೆಯಿದ್ದರೂ, ಚಿಟ್ಟ ಅವರಿಗೆ ಈಗ ಲಭಿಸಿದ ಸಂತಸ ಅವರಿಗೆ ಮತೊಮ್ಮೆ ಬಾಲ್ಯವನ್ನು ತಂದಿತ್ತಿದೆ.
ಪುತ್ರಿ ಕುಂಬ ಅವರ ಮನೆಯಲ್ಲಿ ವಾಸಿಸುತ್ತಿರುವ ಚಿಟ್ಟ ಅವರ 8 ಮಂದಿ ಮಕ್ಕಳಲ್ಲಿ 7 ಮಂದಿ ಕೂಡ ಇವರ ಮನೆಯ ಕೂಗಳೆಯಲ್ಲೇ ವಸತಿ ಹೂಡಿದ್ದಾರೆ. ಹಿರಿಯ ಪುತ್ರ ಮಾತ್ರ ತಮ್ಮ ಕುಟುಂಬದೊಂದಿಗೆ ಎಡತ್ತೋಡು ಎಂಬಲ್ಲಿ ವಾಸವಾಗಿದ್ದಾರೆ.