ಕಾಸರಗೋಡು: ಕಾಸರಗೋಡು ಜಿಲ್ಲೆಯ ಚಟ್ಟಂಚಾಲ್‍ನ ತೆಕ್ಕಿಲ್‍ನಲ್ಲಿ ನಿರ್ಮಾಣಗೊಂಡಿರುವ ಟಾಟಾ ಕೋವಿಡ್ ಆಸ್ಪತ್ರೆಯನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸುವ ಕಾರ್ಯಕ್ರಮ ಸೆ.9ರಂದು ಜರಗಲಿದೆ.
ಅಂದು ಮಧ್ಯಾಹ್ನ 12 ಗಂಟೆಗೆ ಈ ಸಂಬಂಧ ಜರಗುವ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವೀಡಿಯೋ ಕಾನ್ಪರೆನ್ಸ್ ಮೂಲಕ ಹಸ್ತಾಂತರ ಕಾಯಕಕ್ಕೆ ಚಾಲನೆ ನೀಡುವರು. ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು.
ರಾಜ್ಯ ಸರ್ಕಾರದ ಪರವಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಆಸ್ಪತ್ರೆಯ ಹೊಣೆಗಾರಿಕೆಯನ್ನು ಟಾಟಾ ಸಮೂಹ ಸಂಸ್ಥೆಯಿಂದ ಪಡೆದುಕೊಳ್ಳುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎಂ.ಸಿ.ಕಮರುದ್ದೀನ್, ಕೆ.ಕುಂಞÂರಾಮನ್, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಸಹಿತ ಆಮಂತ್ರಿತ 50 ಮಂದಿ ಭಾಗವಹಿಸುವರು. ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಪೂರ್ಣರೂಪದಲ್ಲಿ ಪಾಲಿಸುವ ಮೂಲಕ ಸಮಾರಂಭ ಜರುಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಕೇರಳದ ಪ್ರಪ್ರಥಮ ಟಾಟಾ ಆಸ್ಪತ್ರೆ :
ತೆಕ್ಕಿಲ್ ಗ್ರಾಮದಲ್ಲಿ ನಿರ್ಮಾಣಗೊಂಡು ಸೆ.9ರಂದು ಉದ್ಘಾಟನೆಗೊಳ್ಳುತ್ತಿರುವ ಟಾಟಾ ಕೊರೊನಾ ಆಸ್ಪತ್ರೆ ಕೇರಳ ರಾಜ್ಯದಲ್ಲೇ ಪ್ರಥಮವಾಗಿ ನಿರ್ಮಾಣಗೊಂಡಿರುವ ಕೊರೊನಾ ಹಾಸ್ಪಿಟಲ್ ಆಗಿದೆ.
ಕೋವಿಡ್ ಸೋಂಕು ತಲೆದೋರಿದ್ದ ಆರಂಭದ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದ ರೋಗಿಗಳು ಪತ್ತೆಯಾಗಿದ್ದ ಜಿಲ್ಲೆ ಕಾಸರಗೋಡು ಆಗಿತ್ತು. ಈ ಕಾರಣದಿಂದಲೇ ಇಲ್ಲಿ ಆಸ್ಪತ್ರೆ ನಿರ್ಮಿಸಲು ಟಾಟಾ ಸಂಸ್ಥೆ ಮುಂದೆ ಬಂದಿತ್ತು.
ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ರಾಜ್ಯ ಸರ್ಕಾರದ ಸಹಾಯದೊಂದಿಗೆ ಟಾಟಾ ಸಮೂಹ ಸಂಸ್ಥೆ ಈ ಆಸ್ಪತ್ರೆ ನಿರ್ಮಿಸಿದೆ. ಪ್ರತಿ ಸಂದರ್ಭಗಳಲ್ಲೂ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಅಚಲವಾಗಿ ಬೆಂಬಲಿಸಿದ, ಜಿಲ್ಲಾಡಳಿತೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳು ನೀಡಿರುವ ಸತತ ಸಹಾಯಗಳ ಫಲವಾಗಿ ನಿರ್ಮಾಣ ಚಟವಟಿಕೆಗಳು ತ್ವರಿತಗೊಂಡಿದ್ದುವು ಎಂದು ಟಾಟಾ ಸಮೂಹ ಸಂಸ್ಥೆಯ ಯೋಜನೆ ಆಡಳಿತಾಧಿಕಾರಿ ಆಂಟನಿ ಪಿ.ಎಲ್. ತಿಳಿಸಿರುವರು.
ಟಾಟಾ ಕೋವಿಡ್ ಆಸ್ಪತ್ರೆ : 3 ಝೋನ್ ಗಳು : 551 ಹಾಸುಗೆಗಳು :
ಕೋವಿಡ್ ಪ್ರತಿರೋಧ ಅಂಗವಾಗಿ ಕಾಸರಗೋಡು ಜಿಲ್ಲೆಯ ತೆಕ್ಕಿಲ್ ಗ್ರಾಮದಲ್ಲಿ ಆರಂಭಗೊಳ್ಳುತ್ತಿರುವ ಟಾಟಾ ಕೋವಿಡ್ ಆಸ್ಪತ್ರೆ ಉಳಿದ ಚಿಕಿತ್ಸಾಲಯಗಳಿಗಿಂತ ಭೌತಿಕವಾಗಿ ಭಿನ್ನವಾಗಿದೆ.
3 ಝೋನ್‍ಗಳಾಗಿ ವಿಂಗಡಣೆ ಹೊಂದಿದೆ. ಮೊದಲನೇ ಝೋನ್‍ನಲ್ಲಿ ಕ್ವಾರೆಂಟೈನ್ ಸೌಲಭ್ಯಗಳು, ದ್ವಿತೀಯ ಝೋನ್‍ನಲ್ಲಿ ಕೋವಿಡ್ ಪಾಸಿಟಿವ್ ರೋಗಿಗಳ ದಾಖಲಾತಿ, ತೃತೀಯ ಝೋನ್‍ನಲ್ಲಿ ಪ್ರತ್ಯೇಕ ಐಸೋಲೇಷನ್ ಸಹಿತ ಸೌಲಭ್ಯಗಳು ಇರುವುವು. ಝೋನ್ ಒಂದು ಮತ್ತು ಮೂರರ ಒಂದೊಂದು ಕಂಟೈನರ್‍ಗಳಲ್ಲಿ ತಲಾ 5 ಹಾಸುಗೆಗಳು, ಒಂದು ಶೌಚಾಲಯ, ಝೋನ್ ಎರಡರಲ್ಲಿ ಶೌಚಾಲಯ ಸಹಿತ ಒಂದು ಹಾಸುಗೆ ಇರುವುದು. 126 ಯೂನಿಟ್‍ಗಳಲ್ಲಿ (ಕಂಟೈನರ್‍ಗಳು) ಒಟ್ಟು 551 ಹಾಸುಗೆಗಳು ಆಸ್ಪತ್ರೆಯಲ್ಲಿವೆ. ಪ್ರತಿ ಕಂಟೈನರ್ 40 ಅಡಿ ಉದ್ದ, 10 ಅಡಿ ಅಗಲ ಇರುವುದು. 81 ಸಾವಿರ ಚದರ ಅಡಿ ವಿಸೀರ್ಣವನ್ನು ಆಸ್ಪತ್ರೆ ಹೊಂದಿದೆ.
ತೆಕ್ಕಿಲ್ ಗ್ರಾಮದ 5 ಎಕ್ರೆ ಜಾಗದಲ್ಲಿ ರಸ್ತೆ, ಸ್ವಾಗತ ಸೌಲಭ್ಯ, ಕ್ಯಾಂಟೀನ್, ವೈದ್ಯರಿಗೆ, ದಾದಿಯರಿಗೆ ಪ್ರತ್ಯೇಕ ಕೊಠಡಿಗಳು ಸಹಿತ ಎಲ್ಲ ಸೌಲಭ್ಯಗಳೂ ಈ ಆಸ್ಪತ್ರೆಯಲ್ಲಿವೆ. ರಾಷ್ಟ್ರೀಯ ಹೆದ್ದಾರಿ ಬದಿಯ ಜಾಗವನ್ನು ಪತ್ತೆಮಾಡಿ ಒದಗಿಸುವಲ್ಲಿಂದ ತೊಡಗಿ ಎಲ್ಲ ಹಂತಗಳಲ್ಲೂ ಆಸ್ಪತ್ರೆಯ ಪ್ರಗತಿಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮತ್ತು ಬಳಗದ ಬೆಂಬಲ ನಿರಂತರವಾಗಿತ್ತು.
ಕೋವಿಡ್ ಆಸ್ಪತ್ರೆ : ಟಾಟಾ ಸಂಸ್ಥೆಯಿಂದ ನಾಡಿಗೆ ಓಣಂ ಹಬ್ಬದ ಕೊಡುಗೆ :
ಕೋವಿಡ್ ಆಸ್ಪತ್ರೆಯು ಟಾಟಾ ಸಂಸ್ಥೆಯಿಂದ ನಾಡಿಗೆ ಓಣಂ ಹಬ್ಬದ ಕೊಡುಗೆಯಾಗಿದೆ. ಆಸ್ಪತ್ರೆಯ ಯೂನಿಟ್ ಗಳಿಂದ ತೊಡಗಿ ಎಲ್ಲ ನಿರ್ಮಾಣಗಳನ್ನೂ ಟಾಟಾ ಸಮೂಹ ಸಂಸ್ಥೆ ಉಚಿತವಾಗಿಯೇ ನಡೆಸಿಕೊಟ್ಟಿದೆ. ದೇಶದ ವಿವಿಧೆಡೆ ತುರ್ತು ಪರಿಸ್ಥಿತಿಗಳಲ್ಲಿ ಈ ಸಂಸ್ಥೆಯು ಇಂತಹ ಆಸ್ಪತ್ರೆಗಳನ್ನು ನಿರ್ಮಿಸಿ ಆಯಾ ಸರ್ಕಾರಗಳಿಗೆ ಒದಗಿಸಿದೆ.
ತೆಕ್ಕಿಲ್ ಗ್ರಾಮದಲ್ಲಿ 5 ಎಕ್ರೆ ಜಾಗ, ಜಲ, ವಿದ್ಯುತ್ ಸಹಿತ ಆಸ್ಪತ್ರೆ ವ್ಯವಸ್ಥೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ರಾಜ್ಯ ಸರಕಾರ ಮತ್ತು ಕಾಸರಗೋಡು ಜಿಲ್ಲಾಡಳಿತೆ ಒದಗಿಸಿದೆ. 1.25 ಲಕ್ಷ ಲೀ. ನೀರು ಸಂಗ್ರಹಿಸುವ ಟ್ಯಾಂಕ್, ಶೌಚಾಲಯಗಳ ತ್ಯಾಜ್ಯ ಸಂಸ್ಕರಣೆಗೆ 63 ಬಯೋ ಜೈ ಜಸ್ಟರ್ಸ್, 8 ಓವರ್ ಫ್ಲೈ ಟಾಂಕಿಗಳು ಹೀಗೆ ಅನೇಕ ವಿಶೇಷತೆಗಳನ್ನು ಆಸ್ಪತ್ರೆ ಹೊಂದಿದೆ.
ಟಾಟಾ ಕೋವಿಡ್ ಆಸ್ಪತ್ರೆ : 4 ತಿಂಗಳ, 50 ಕಾರ್ಮಿಕರು :
ಟಾಟಾ ಕೋವಿಡ್ ಆಸ್ಪತ್ರೆ ನಿರ್ಮಾಣ 4 ತಿಂಗಳ ಅವಧಿಯಲ್ಲಿ ನಡೆದಿದೆ. 50 ಕಾರ್ಮಿಕರು ಇದಕ್ಕಾಗಿ ಅಹೋರಾತ್ರಿ ದುಡಿಮೆ ನಡೆಸಿದ್ದಾರೆ. ಏ.28 ರಂದು ಆಸ್ಪತ್ರೆಯ ನಿರ್ಮಾಣ ಆರಂಭಗೊಂಡಿತ್ತು. ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ನಿರ್ಮಾಣ ಪೂರ್ತಿಗೊಂಡಿತ್ತು. ಪ್ರತಿಕೂಲ ಪರಿಸ್ಥಿತಿಯಲ್ಲಿ, ಕೋವಿಡ್ ಸೋಂಕಿನ ತೀವ್ರತೆಯ ನಡುವೆಯೂ ಕಾಮಗಾರಿ ನಡೆದು ಪೂರ್ತಿಗೊಂಡಿದೆ. ಕಾರ್ಮಿಕರು ಊರಿಗೆ ತೆರಳಿದವರು ಮರಳಿ ಬರದೇ ಮುಗ್ಗಟ್ಟು ತಲೆದೋರಿದ್ದರೂ, ನಿರ್ಮಾಣಕ್ಕೆ ತಡೆಯಾಗಿರಲಿಲ್ಲ ಎಂಬುದು ಗಮನಾರ್ಹ.