ಲಖನೌ: ಅಲಿಗಢ್ ಮುಸ್ಲಿಂ ವಿಶ್ವವಿದ್ಯಾಲಯ(ಎಎಂಯು)ಕ್ಕೆ ಸಂಬಂಧಿಸಿದಂತೆ ಈಗ ಹೊಸ ವಿವಾದ ಹುಟ್ಟಿಕೊಂಡಿದ್ದು, ಮುಸ್ಲಿಂ ವಿವಿ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೂಮಿಯನ್ನು ದಾನ ಮಾಡಿದ ದಿವಂಗತ ಜಾಟ್ ರಾಜ ಮಹೇಂದ್ರ ಪ್ರತಾಪ್ ಸಿಂಗ್ ಅವರ ವಂಶಸ್ಥರು ಎಎಂಯುಗೆ ನೀಡಿದ ಭೂಮಿಯನ್ನು ವಾಪಸ್ ನೀಡುವಂತೆ ಕೇಳಿದ್ದಾರೆ.
ಎಎಂಯುಗೆ ಭೂಮಿಯನ್ನು 90 ವರ್ಷಗಳ ಗುತ್ತಿಗೆ ನೀಡಿಲಾಗಿತ್ತು. ಗುತ್ತಿಗೆ ಅವಧಿ ಕಳೆದ ವರ್ಷ ಮುಕ್ತಾಯಗೊಂಡಿದೆ. ಹೀಗಾಗಿ ಭೂಮಿಯನ್ನು ಮರಳಿಸುವಂತೆ ರಾಜನ ಸಂಬಂಧಿಗಳು ಮನವಿ ಮಾಡಿದ್ದಾರೆ. ಅಲ್ಲದೆ ನಗರದ ಶಾಲೆಗೆ ದಿವಂಗತ ರಾಜನ ಹೆಸರಿಡುವಂತೆ ಎಎಂಯು ಆಡಳಿತಕ್ಕೆ ಒತ್ತಾಯಿಸಿದ್ದಾರೆ.
ಆದಾಗ್ಯೂ, ಎಎಂಯು ಕಾರ್ಯನಿರ್ವಾಹಕ ಮಂಡಳಿಯು ಈ ವಿಷಯವನ್ನು ಪರಿಶೀಲಿಸಲು ಮತ್ತು ಅದರ ವರದಿಯನ್ನು ವಿವಿ ಆಡಳಿತಕ್ಕೆ ಸಲ್ಲಿಸಲು ಒಂದು ಸಮಿತಿಯನ್ನು ರಚಿಸಿದೆ.
ದೇಶದ ಸ್ವಾತಂತ್ರ್ಯ ಸಂಗ್ರಾಮದ ಭಾಗವಹಿಸಿದ್ದ ಹಾಗೂ ಸಾಮಾಜ ಸುಧಾರಕರಾಗಿದ್ದ ಮಹೇಂದ್ರ ಪ್ರತಾಪ್ ಸಿಂಗ್(1886-1979) ಅವರು 1929 ರಲ್ಲಿ ಶಾಲೆ ನಿರ್ಮಿಸಲು 3.04 ಎಕರೆ ಭೂಮಿಯನ್ನು ವಿಶ್ವವಿದ್ಯಾಲಯಕ್ಕೆ ಲೀಸ್ ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ ಸ್ವತಃ ಮೊಹಮ್ಮದನ್ ಆಂಗ್ಲೋ-ಓರಿಯಂಟಲ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು, ಈ ಕಾಲೇಜ್ ನಂತರ ಎಎಂಯು ಆಗಿ ಮಾರ್ಪಟ್ಟಿದೆ.
ದಿವಂಗತ ರಾಜನ ಮೊಮ್ಮಗ ಚರತ್ ಪ್ರತಾಪ್ ಸಿಂಗ್ ಅವರ ಆಪ್ತ ಮೂಲಗಳ ಪ್ರಕಾರ, ಸಿಂಗ್ ವಂಶಸ್ಥರು ಗುತ್ತಿಗೆ ಅವಧಿ ಮುಗಿಯುವ ಬಗ್ಗೆ 2018 ರಲ್ಲಿ ವಿಶ್ವವಿದ್ಯಾಲಯಕ್ಕೆ ಲೀಗಲ್ ನೋಟಿಸ್ ನೀಡಿದ್ದಾರೆ.