ಮಂಜೇಶ್ವರ: ವರ್ಕಾಡಿ ಗ್ರಾ. ಪಂ. ವ್ಯಾಪ್ತಿಯ ಅಂತರ್ ರಾಜ್ಯ ಗಡಿ ಪ್ರದೇಶಗಳಲ್ಲಿ ಈಗಲೂ ಗಡಿ ದಾಟುವವರನ್ನು ತಡೆಯವ ಪ್ರಕ್ರಿಯೆ ಮುಂದುವರಿಯುತ್ತಿರುವುದು ಸ್ಥಳಿಯರನ್ನು ಮತ್ತಷ್ಟು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ರಾಜ್ಯದ ಒಳಗೆ ಹಾಗೂ ಹೊರಗೆ ವಾಸಿಸುತ್ತಿರುವ ಜನರಿಗೆ ಹಾಗೂ ಸರಕು ಸಾಮಾಗ್ರಿಗಳಿಗೆ ನಿಯಂತ್ರಣವನ್ನು ಹೇರಿರುವುದು ಗ್ರಾಮಸ್ಥರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ವರ್ಕಾಡಿ ಭಾಗದಲ್ಲಿ ಇರುವವರಿಗೆ ಮಾತ್ರ ದಾಖಲೆ ಪುಸ್ತಕಗಳಲ್ಲಿ ಹೆಸರನ್ನು ದಾಖಲಿಸಿ ಗಡಿದಾಟಬಹುದಾಗಿದೆ. ಆದರೆ ಆನೆಕಲ್ಲಿಗೆ ಸಮೀಪವಿರುವ ಇತರ ಪಂಚಾಯತಿಗೊಳಪಟ್ಟವರಿಗೆ ಗಡಿದಾಟುವ ಅನುಮತಿಯನ್ನು ನಿರಾಕರಿಸಲಾಗಿದೆ.
ಜಿಲ್ಲಾಧಿಕಾರಿಯವರ ನಿರ್ದೇಶ ಪ್ರಕಾರ ವರ್ಕಾಡಿ ಗ್ರಾಮ ಪಂ. ನ ಬೋರ್ಡ್ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯವನ್ನು ಪಾಸ್ ಮಾಡಿ ಜಾರಿಗೆ ತಂದಿರುವುದಾಗಿ ಪಂ. ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
ಬೇರೆ ಯಾವ ಪಂಚಾಯತು ಕೂಡಾ ಇಂತಹ ನಿರ್ಣಯವನ್ನು ಕೈಗೊಳ್ಳದೇ ಇರುವಾಗ ವರ್ಕಾಡಿ ಗ್ರಾ.ಪಂ. ಮಾತ್ರ ಇದನ್ನು ಮುತುವರ್ಜಿ ತೆಗೆದು ಅನುಷ್ಟಾನಕ್ಕೆ ತಂದು ಗ್ರಾಮಸ್ತರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿರುವುದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.ಅನ್ ಲಾಕ್ 4 ರ ಕೇಂದ್ರ ಸರ್ಕಾರದ ಆದೇಶವನ್ನು ಇಲ್ಲಿ ಗಾಳಿ ತೂರಲಾಗಿರುವುದಾಗಿ ನಾಗರಿಕರು ಆರೋಪಿಸಿದ್ದಾರೆ.