ಎರ್ನಾಕುಳಂ: ತ್ರಿಕ್ಕಾಕರ ವಾಮನಮೂರ್ತಿ ದೇವಸ್ಥಾನವು ಅಪರೂಪದ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ವಾಮನ ಮತ್ತು ಮಹಾಬಲಿಗೆ ಸಮಾನವಾಗಿ ಸಮರ್ಪಿತವಾಗಿದೆ ಮತ್ತು ಕೇರಳದ ಏಕೈಕ ವಾಮನ ದೇವಾಲಯವೆಂಬ ನೆಗಳ್ತೆಗೂ ಪಾತ್ರವಾಗಿದೆ. ಎರ್ನಾಕುಳಂ ಜಿಲ್ಲೆಯ ತ್ರಿಕ್ಕಕರ ದೇವಸ್ಥಾನವು ಅನೇಕ ವಿಶೇಷತೆಗಳನ್ನು ಹೊಂದಿದೆ. ಕೇರಳದ ಓಣಂ ಆಚರಣೆಗಳ ಕೇಂದ್ರವಾದ ತ್ರಕ್ಕಾಕರ ದೇವಸ್ಥಾನ ಕೇರಳದ ನಂಬಿಕೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ.
ತ್ರಿಕ್ಕಾಕರ ದೇವಸ್ಥಾನ ಕೇರಳದ ವೈಷ್ಣವ ಧರ್ಮದ ಪ್ರಮುಖ ದೇವಾಲಯಗಳಲ್ಲಿ ಒಂದು. ಈ ದೇವಾಲಯವು ವಿಷ್ಣು ಭಕ್ತರ 13 ಪ್ರಮುಖ ದೈವಿಕ ಭೂಮಿಯಲ್ಲಿ ಒಂದಾಗಿದೆ ಮತ್ತು ಕೇರಳದ ಅನೇಕ ಧರ್ಮಗಳೊಂದಿಗೆ ಸಂಬಂಧ ಹೊಂದಿದೆ. ಈ ದೇವಾಲಯವು ಕೇರಳದಲ್ಲಿ ಓಣಂ ಹಬ್ಬಾಚರಣೆಯ ವೇಳೆ ಪ್ರಮುಖ ಸ್ಥಾನ ಪಡೆದು ಅನೇಕರ ಮನಸ್ಸಿಗೆ ಬರುವ ಮೊದಲ ಹೆಸರು ಈ ದೇವಾಲಯದ್ದು.
ತ್ರಿಕ್ಕಾಕರ ದೇವಾಲಯವು ವಾಮನ, ಮಹಾಬಲಿಗಳನ್ನು ಒಟ್ಟಿಗೆ ಪೂಜಿಸುವ ದೇವಾಲಯವಾಗಿದೆ. ಮಹಾಬಲಿಯನ್ನು ನೇರವಾಗಿ ಪೂಜಿಸದಿದ್ದರೂ, ಹತ್ತಿರದ ಶಿವ ದೇವಾಲಯದಲ್ಲಿ ಮಹಾಬಲಿಯಿಂದ ಪೂಜಿಸಲ್ಪಟ್ಟ ಶಿವನ ಸ್ವಯಂಭು ಲಿಂಗವಿದೆ. ಭಕ್ತರು ತ್ರಿಕ್ಕಾಕರ ದೇವಸ್ಥಾನವನ್ನು ಸಂದರ್ಶಿಸಿದಾಗ ತ್ರಿಕ್ಕಾಕರಾಯಪ್ಪನ್ ಜೊತೆಗೆ ಮಹಾಬಲಿಯನ್ನು ಪೂಜಿಸುತ್ತಾರೆ.
ಕೇರಳದ ಓಣಂನ ಇತಿಹಾಸವು ತ್ರಿಕ್ಕರಾಯಪ್ಪನ್ ಮತ್ತು ಮಹಾಬಲಿಯ ದಂತಕಥೆಯಂತೆಯ ರೂಪದಲ್ಲಿ ಹರಿದುಬಂದಿದೆ. ಮಹಾಬಲಿ ಪ್ರಹ್ಲಾದನ ಮೊಮ್ಮಗ. ಮಹಾಬಲಿ ಜನ ಸಾಮಾನ್ಯರೆಡೆಯಲ್ಲಷ್ಟೇ ಅಲ್ಲದೆ ತ್ರಿಮೂರ್ತಿಗಳಿಗೂ ಅಚ್ಚುಮೆಚ್ಚಿನವನಾಗಿದ್ದ. ಇದು ದೇವತೆಗಳ ಅಸೂಯೆಗೆ ಕಾರಣವಾಯಿತು. ಈ ನಿಟ್ಟಿನಲ್ಲಿ ದೇವತೆಗಳು ಪರಿಹಾರವನ್ನು ಕಂಡುಕೊಳ್ಳಲು ನಿರ್ಧರಿಸಿದರು. ಇದಕ್ಕಾಗಿ ಅವರು ತ್ರಿಮೂರ್ತಿಗಳಲ್ಲೇ ಸಹಾಯವನ್ನು ಕೋರಿದರು. ಮಹಾವಿಷ್ಣು ಅಂತಿಮವಾಗಿ ಪರಿಹಾರದ ಭರವಸೆ ನೀಡಿದನು. ಮುಂದೆ ಮಹಾಬಲಿ ವಿಶ್ವಜಿತ್ ಯಾಗ ಮಾಡಿದಾಗ, ವಿಷ್ಣು ವಾಮನ ರೂಪಿಂದ ಬಲಿಯ ಬಳಿಗೈದಿದನು. ಯಾಗಭೂಮಿಗೆ ಆಗಮಿಸಿದ ವಾವನನಿಗೆ ಕೇಳಿದ್ದನ್ನು ನೀಡುವೆನೆಂದು ಭಾಷೆ ನೀಡಿದನು. ವಾಮನ ರೂಪದಲ್ಲಿ ಅವತರಿಸಿದ್ದ ವಿಷ್ಣು ಮೂರು ಅಡಿ ಮಣ್ಣನ್ನು ಬೇಡಿಕೊಂಡನು. ಮಹಾಬಲಿಗೆ ಈ ಸಂದರ್ಭ ಗುರು ಶುಕ್ರಾಚಾರ್ಯರು ಇದರ ಹಿಂದಿನ ಮೋಸವನ್ನು ಅರಿತು ಮಹಾಬಲಿಯನ್ನು ಎಚ್ಚರಿಸಿದರೂ ಕೊಟ್ಟ ಭಾಷೆಯಿಂದ ಹಿಂದೆ ಸರಿಯದೆ ಮಹಾಬಲಿಯು ಕೇಳಿದ್ದನ್ನು ನೀಡಲು ಮುಂದಾದನು. ಕೂಡಲೇ ವಾಮನನು ತನ್ನ ದೈತ್ಯಾಕಾರದ ರೂಪವನ್ನು ಪಡೆದು ಅವನ ಪಾದಗಳನ್ನು ಅಳತೆ ಮಾಡಿದನು. ಮೊದಲ ಎರಡು ಹಂತಗಳಿಗೆ ವಾಮನನು ಆಕಾಶ ಮತ್ತು ಭೂಮಿಯನ್ನು ಅಳೆದು ಮೂರನೆಯ ಪಾದವನ್ನು ಎಲ್ಲಿಡಲಿ ಎಂದು ಕೇಳಲು ಮಹಾಬಲಿ ತನ್ನ ತಲೆಯನ್ನು ವಾಮನನಿಗೆ ತೋರಿಸಿದನು. ಈ ಸಂದರ್ಭ ವಾಮನ ರೂಪಿಯ ಮಹಾವಿಷ್ಣು ಬಲಿಯ ತಲೆಯನ್ನು ತನ್ನ ಪಾದಗಳಿಂದ ಮೆಟ್ಟಿ ಪಾತಾಳಕ್ಕೆ ಕಳುಹಿಸಿದನು. ಜೊತೆಗೆ ಪಾತಾಳದ ಸುತಳ ಪ್ರಪಂಚದ ಆಡಳಿತಗಾರನನ್ನಾಗಿ ನೇಮಿಸಿದನೆಂಬುದು ಕಥಾನಕ. ಮತ್ತು ವರ್ಷಕ್ಕೆ ಒಮ್ಮೆ ತಿರುಓಣಂ ದಿನದಂದು ತನ್ನ ಪ್ರಜೆಗಳನ್ನು ನೋಡಲು ಭೂಮಿಗೆ ಬರಲು ಅವಕಾಶ ನೀಡಲಾಯಿತು. ಪ್ರತಿ ತಿರುಓಣಂ ಗೆ ಮಹಾಬಲಿ ತನ್ನ ಪ್ರಜೆಗಳ ಭೇಟಿಗೆ ಆಗಮಿಸುತ್ತಾನೆಂಬುದು ಕೇರಳದ ಅಚಲ ನಂಬಿಕೆ.
ವಾಮನನು ಮಹಾಬಲಿಯನ್ನು ಭೂಮಿಗೆ ಕರೆದೊಯ್ದ ಸ್ಥಳ ತ್ರಿಕ್ಕಾಕರ ಎಂಬುದು ನಂಬಿಕೆ. ಅಲ್ಲಿ ತಾನು ಭೂತಳಕ್ಕೆ ಇಳಿದ ಮಹಬಾಲಿಯನ್ನು ವಾಮನ ಸ್ವೀಕರಿಸುತ್ತಾನೆ. ಈ ವಿಶೇಷ ಸಮಾರಂಭವನ್ನು ತಿರುಓಣಂ ದಿನದಂದು ದೇವಸ್ಥಾನದಲ್ಲಿ ನಡೆಸಲಾಗುತ್ತದೆ. ಆ ದಿನ, ವಾಮನನು ದೇವಾಲಯದ ಸುತ್ತ ಮಹಾಬಲಿಯನ್ನು ಸ್ವೀಕರಿಸುತ್ತಾನೆ.
ಕಪಿಲ ಮಹರ್ಷಿ:
ತ್ರಿಕ್ಕಕಾರ ದೇವಸ್ಥಾನವು ಕಪಿಲ ಮಹರ್ಷಿಯೊಂದಿಗೆ ಸಂಬಂಧ ಹೊಂದಿದೆ. ಈ ಪ್ರದೇಶದ ಮಹತ್ವಿಕೆಯಾದ ಮಹಾಬಲಿ ಬಗ್ಗೆ ತಿಳಿಯಲು ಕಪಿಲಾ ಮಹರ್ಷಿ ಇಲ್ಲಿಗೆ ಬಂದರು ಎಂದು ನಂಬಲಾಗಿದೆ. ನಂತರ ತಪಸ್ಸು ಮಾಡಲು ಸಂತುಷ್ಠನಾದ ವಿಷ್ಣುವಲ್ಲಿ ಕಪಿಲ ಮುನಿಗಳು ಈ ಪ್ರದೇಶದಲ್ಲಿ ವಿಷ್ಣು ಸಾನ್ನಿಧ್ಯಕ್ಕಾಗಿ ಅವಕಾಶ ಕೇಳಿದರು. ಆದ್ದರಿಂದ ಅವರ ಕೋರಿಕೆಯ ಮೇರೆಗೆ ವಿಷ್ಣು ಇಲ್ಲಿಯೇ ಇರಲು ನಿರ್ಧರಿಸಿದನು.
ವಾಮನ ದೇವಸ್ಥಾನ ಮತ್ತು ಶಿವ ದೇವಾಲಯ:
ವಾಮನ ದೇವಾಲಯ ಮತ್ತು ಶಿವ ದೇವಾಲಯವು ತ್ರಿಕ್ಕಾಕರ ಮಹಾ ದೇವಾಲಯದಲ್ಲಿ ಜೊತೆಜೊತೆಯಾಗಿದೆ. ಇವುಗಳಲ್ಲಿ ಅತ್ಯಂತ ಹಳೆಯದು ಶಿವ ದೇವಾಲಯ. ಈ ದೇವಾಲಯದಲ್ಲಿ ಮಹಾಬಲಿ ಪ್ರಾರ್ಥನೆ ಮಾಡುತ್ತಿದ್ದರು ಎಂದು ನಂಬಲಾಗಿದೆ. . ಶಿವನನ್ನು ಪೂಜಿಸಿದ ಬಳಿಕ ವಾಮನನ್ನು ಪೂಜಿಸುವುದು ಈ ದೇವಾಲಯದ ರೂಢಿ. ಇಲ್ಲಿರುವ ವಿಗ್ರಹವು ಮಹಾಬಲಿ ಪೂಜಿಸಿದ ಶಿವಲಿಂಗ ಎಂದು ನಂಬಲಾಗಿದೆ. ವಿಷ್ಣು ಮಹಾಬಲಿಗೆ ಮೂರು ಅಡಿ ಮಣ್ಣನ್ನು ದಾನ ಮಾಡಿ ಆಶೀರ್ವದಿಸಿದ್ದಾನೆ ಎನ್ನಲಾಗಿದೆ.
ಕಪಿಲಾ ತೀರ್ಥಂ:
ತ್ರಿಕ್ಕಾಕರ ದೇವಸ್ಥಾನದಲ್ಲಿ ಎರಡು ದೇವಾಲಯ ಕೊಳಗಳಿವೆ. ಕಪಿಲಾ ತೀರ್ಥಂ ಒಂದು. ದೇವಾಲಯವನ್ನು ಸಮರ್ಪಿಸಿದ ಕಪಿಲ ಮಹರ್ಷಿ ಅವರ ಹೆಸರಿನ ಈ ತೀರ್ಥದಲ್ಲಿ ತಂತ್ರ ಪಾರಂಗತರು ಮತ್ತು ಋಷಿಮುನಿಗಳಿಗೆ ಮಾತ್ರ ಸ್ನಾನ ಮಾಡಲು ಅವಕಾಶವಿದೆ. ಭಕ್ತರಿಗೆ ಹತ್ತಿರದಲ್ಲಿ ಮತ್ತೊಂದು ದೇವಾಲಯದ ಕೊಳವಿದೆ.
ಬ್ರಹ್ಮ ರಾಕ್ಷಸರ ದೇವಾಲಯವು ತ್ರಿಕ್ಕಾರದಲ್ಲಿದೆ. ಈ ದೇವಾಲಯವು ವಾಮನ ದೇವಾಲಯದ ಈಶಾನ್ಯ ಮೂಲೆಯಲ್ಲಿದೆ. ಈ ಹಿಂದೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ ಒರುನ್ನಿ ತ್ರಿಕ್ಕರಾಯಪ್ಪನ್ ಶಾಪಗ್ರಸ್ತನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈ ಶಾಪವು ದೇವಾಲಯವನ್ನು ನಾಶಮಆಡಿತು. ನಂತರ, ದೇವಾಲಯವು ಹಿಂದಿನ ವೈಭವಕ್ಕೆ ಮರಳಿದಾಗ, ಅದರಲ್ಲಿ ಬ್ರಹ್ಮರಾಕ್ಷಸರಿಗೆ ಸ್ಥಾನ ನೀಡಲಾಯಿತು.
ಮಹಾಬಲಿಯ ಸಿಂಹಾಸನ:
ಈ ಸ್ಥಳದ ಮತ್ತೊಂದು ಆಕರ್ಷಣೆಯೆಂದರೆ ಮಹಾಬಲಿಯ ಸಿಂಹಾಸನ. ಇದು ಶಿವ ದೇವಾಲಯದ ಮುಂಭಾಗದಲ್ಲಿದೆ. ಮಹಾಬಲಿಯ ಸಿಂಹಾಸನವನ್ನು ಆಲದ ಮರದ ಕೆಳಗೆ ನಿರ್ಮಿಸಲಾಗಿದೆ. ಇಲ್ಲಿ ಪ್ರತಿದಿನ ದೀಪಗಳನ್ನು ಉರಿಸಲಾಗುತ್ತದೆ.