ಪಾಲಕ್ಕಾಡ್: ಜಗತ್ತನ್ನೇ ನಡುಗಿಸಿ ಹೈರಾಣಗೊಳಿಸುತ್ತಿರುವ ಕೋವಿಡ್ ವ್ಯಾಪಕ ಪ್ರಮಾಣದಲ್ಲಿ ಜನಸಾಮಾನ್ಯರ ಬದುಕನ್ನು ಸಂದಿಗ್ದಾವಸ್ಥೆಗೆ ತಳ್ಳಿದೆ. ಅನೇಕ ಬಡ-ಮದ್ಯಮ ವರ್ಗದ ನವ ಜನಾಂಗ ಉದ್ಯೋಗ ಕಳಕೊಂಡು ಅತಂತ್ರ ಬದುಕಿನೊಂದಿಗೆ ದಿಕ್ಕೆಟ್ಟಿದ್ದು ಮುಂದೇನು ಎಂಬ ಪ್ರಶ್ನೆಗಳು ಕಾಡುವ ನಡುವೆ ಮತ್ತೊಂದೆಡೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ಸ್ವಾರ್ಥ, ವ್ಯಭಿಚಾರ, ಕೊಲೆ, ಸುಲಿಗೆಗಳಲ್ಲಿ ವ್ಯಸ್ಥರಾಗುತ್ತಿರುವುದು ಕಂಡುಬರುತ್ತಿದೆ. ಅಂತಹ ಸೂಕ್ಷ್ಮತೆಗಳು ಸಾಮಾಜಿಕತೆಯ ಮೇಲೆ ದೀರ್ಘಕಾಲಿಕ ದುಷ್ಪರಿಣಾಮಕ್ಕೆ ಕಾರಣವಾಗುವ ಭೀತಿ ಇದ್ದು ಸಜ್ಜನ ಜನಸಾಮಾನ್ಯರ ಕಳವಳಕ್ಕೂ ಕಾರಣವಾಗಿದೆ.
ಈ ನಿಟ್ಟಿನಲ್ಲಿ ಸಮರಸ ಸುದ್ದಿ ಇಂದಿನಿಂದ ಅನಿಯಮಿತವಾಗಿ ಅಂತಹ ವಸ್ತು ವಿಷಯಗಳ ಬಗ್ಗೆ ಬೆಳಕು ಚೆಲ್ಲಿ ಸಾಮಾಜಿಕ ಸುಸ್ಥಿರತೆಗೆ ಪ್ರಯತ್ನಿಸುವ ಪುಟ್ಟ ಪ್ರಯತ್ನಕ್ಕೆ ತೊಡಗಿಸಿಕೊಂಡಿದೆ. ಕೆಲವರಿಗಿದು ಪಥ್ಯವಾಗದಿರಬಹುದು. ಆದರೆ ಬಿಲ್ಡ್ ಪಾಸಿಟಿವ್ ಸೊಸೈಟಿ(ಧನಾತ್ಮಕ ಸಮಾಜ ನಿರ್ಮಾಣ) ಎಂಬ ಮೂಲತತ್ವದ ಸಮರಸ ಸುದ್ದಿಗೆ ಪಥ್ಯ-ಅಪಥ್ಯಗಳ ಯಾವ ಮುಲಾಜೂ ಇಲ್ಲವೆಂಬುದನ್ನು ಇಲ್ಲಿ ಧೈರ್ಯದಿಂದ ಹೇಳಬಯಸುತ್ತಾ...ಸಂಚಿಕೆಯ ಮೊದಲ ಬರಹ ಇಲ್ಲಿದೆ.....
ಕೋವಿಡ್ ಹಿನ್ನೆಲೆಯಲ್ಲಿ ಕೇರಳದಲ್ಲಿ ನಕ್ಸಲ್ ಚಟುವಟಿಕೆ ಸ್ಥಬ್ಧಗೊಂಡಿದ್ದರೂ, ಈ ತಂಡದಿಂದ ಗುಪ್ತ ಕೇಂದ್ರಗಳಲ್ಲಿ ಅಧ್ಯಯನ ತರಗತಿಯನ್ನು ಮುಂದುವರಿಸಿಕೊಂಡು ಬರುತ್ತಿರುವ ಬಗ್ಗೆ ಇಂಟೆಲಿಜೆನ್ಸ್ ವಿಭಾಗದ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ.
ಕೇರಳ, ತಮಿಳ್ನಾಡು, ಕರ್ನಾಟಕ ಕೇಂದ್ರೀಕರಿಸಿ, ಟ್ರೈಜಂಕ್ಷನ್ ಪ್ರದೇಶಗಳಲ್ಲಿ ವಿಕ್ರಂ ಗೌಡ, ಸೋಮನ್ ಎಂಬ ನಕ್ಸಲ್ ಮುಖಂಡರನ್ನು ಒಳಗೊಂಡ ತಂಡ ಪ್ರತ್ಯೇಕ ತರಗತಿಗಳನ್ನು ಆಯೋಜಿಸಿರುವುದನ್ನು ಇಂಟೆಲಿಜೆನ್ಸ್ ಪತ್ತೆಹಚ್ಚಿದೆ. ಆಂಧ್ರ, ತಮಿಳ್ನಾಡು, ಕರ್ನಾಟಕದ ಯುವಕರ ಒಂದು ವಿಭಾಗ ಇಂದಿಗೂ ನಕ್ಸಲ್ ಚಟುವಟಿಕೆಗಳತ್ತ ಆಕರ್ಷಿತರಾಗಿ ಇಂತಹ ಅಧ್ಯಯನ ತರಗತಿಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಮಾಹಿತಿ ಅಧಿಕಾರಿಗಳಿಗೆ ಲಭಿಸಿದೆ. ನಗರ ಪ್ರದೇಶಗಳನ್ನು ಕೇಂದ್ರೀಕರಿಸಿ ಯುವಕರನ್ನು ಈ ಕೇಂದ್ರಗಳತ್ತ ಆಕರ್ಷಿಸಲಾಗುತ್ತಿದೆ. ಕುಪ್ಪು ದೇವರಾಜ್ ಒಳಗೊಂಡಂತೆ ಹಿರಿಯ ನಕ್ಸಲ್ ಮುಖಂಡರು ಸಾವಿಗೀಡಾದ ಹಿನ್ನೆಲೆಯಲ್ಲಿ ನಕ್ಸಲ್ ಚಟುವಟಿಕೆ ಕ್ಷೀಣಗೊಂಡಿರುವುದನ್ನು ಪರಿಗಣಿಸಿ ಹೊಸ ಸದಸ್ಯರನ್ನು ಆಕರ್ಷಿಸುವ ಮೂಲಕ ಚಟುವಟಿಕೆ ಮತ್ತಷ್ಟು ಬಲಪಡಿಸಲು ತಯಾರಿ ನಡೆಸಲಾಗುತ್ತಿದೆ.
ಇದಕ್ಕೆ ಪೂರಕವಾಗಿ ಅರ್ಬನ್ ನಕ್ಸಲ್ ಚಟುವಟಿಕೆಗಳಲ್ಲಿ ರಹಸ್ಯವಾಗಿ ಕಾರ್ಯಾಚರಿಸುತ್ತಿರುವವರು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನೆಪದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೆಲವೊಂದು ರಾಜಕೀಯ ಪಕ್ಷಗಳ ಮೂಲಕವೂ ನುಸುಳಿ ಚಟುವಟಿಕೆ ನಡೆಸುವ ಮೂಲಕ ನಕ್ಸಲ್ ಚಟುವಟಿಕೆ ಗುಪ್ತವಾಗಿ ನಡೆಸುತ್ತಿರುವ ಬಗ್ಗೆ ಮಾಹಿತಿಯಿದೆ. ಮಲಪ್ಪುರಂ ಜಿಲ್ಲೆಯ ನಿಲಂಬೂರ್ ಅರಣ್ಯ ಪ್ರದೇಶದಲ್ಲಿ 2012ರಿಂದಲೂ ನಕ್ಸಲ್ ಚಟುವಟಿಕೆ ನಡೆಯುತ್ತಿದ್ದರೂ, ಕೇರಳದ ಪೊಲೀಸ್ ಬಲದಿಂದ ಇದರ ದಮನಕಾರ್ಯ ಇನ್ನೂ ಸಾಧ್ಯವಾಗಿಲ್ಲ. ನಂತರದ ದಿನಗಳಲ್ಲಿ ಇವರ ಸದಸ್ಯ ಬಲದಲ್ಲಿ ಹೆಚ್ಚಳವುಂಟಾಗುತ್ತಾ ಬಂದಿದ್ದು, ಕಬಿನಿ, ನಾಟುಕಾಣಿ ಮುಂತಾದ ನಕ್ಸಲ್ ಸಂಘಟನೆಗಳ ಹೊರತಾಗಿ ವಾರಾಹಿ, ಬಾಣಾಸುರ ಎಂಬ ತಂಡಗಳೂ ಸಕ್ರಿಯವಾಗಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಆದರೆ....ಈ ಮಧ್ಯೆ ಇಂತಹವಕ್ಕೆಲ್ಲ ಶಕ್ತಿ ನೀಡುವವರು ಯಾರೆಂಬುದು ಗೌಪ್ಯವಾಗಿಯೇ ಇದೆ. ಜೊತೆಗೆ ಇವರ ಬೆನ್ನಿಗೆ ಕೆಲವು ರಾಜಕೀಯ ನಾಯಕರು ಒತ್ತಾಸೆಯಾಗಿದ್ದಾರೆ ಎಂಬ ಸಂಶಯಗಳು ಕೇಳಿಬಂದಿದ್ದು ನಿಯಂತ್ರಿಸುವವರು ಯಾರು?