ಪೆರ್ಲ: ಫ್ಯಾಶನ್ ಗೋಲ್ಡ್ ಚಿನ್ನದ ವ್ಯವಹಾರದಲ್ಲಿ ಮೋಸಗಾರ ನಾದ ಆರೋಪಿ ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದಿನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಎಣ್ಮಕಜೆ ಪಂಚಾಯತಿ ಬಿಜೆಪಿಯ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಬಿಜೆಪಿ ಉತ್ತರ ವಲಯ ಉಪಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಾಸಕರ ವಿರುದ್ದ ಜನ ರೋಷ ಅತಿಯಾಗುತ್ತಿದೆ. ಶೀಘ್ರವಾಗಿ ಬಹಳಷ್ಟು ದೂರುಗಳು ದಾಖಲಾಗಿದ್ದರೂ ಇನ್ನೂ ನೈತಿಕತೆ ಇಲ್ಲದೆ ಶಾಸಕ ಸ್ಥಾನದಲ್ಲಿ ಮುಂದುವರಿಯುತ್ತಿರುವುದು ಹೇಯಕರವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಶೀಘ್ರ ರಾಜೀನಾಮೆ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ರೂಪವಾಣಿ ಆರ್ ಭಟ್ ಮಾತನಾಡಿ ಎಣ್ಮಕಜೆ ಪಂಚಾಯತಿಯ ಯುಡಿಎಫ್ ಹಾಗೂ ಎಲ್ ಡಿ ಎಫ್ ಅಪವಿತ್ರ ಮೈತ್ರಿಯ ಭ್ರಷ್ಟಾಚಾರ ಆಡಳಿತ ಶಾಸಕರಿಗೆ ಬೆಂಬಲವಾಗಿ ನಿಂತಿರುವುದು ನಿಜವಾಗಿಯೂ ಹೇಸಿಗೆ ತರುವ ವಿಚಾರ ಎಂದು ನುಡಿದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮುರಳಿಧರ ಯಾದವ್ ಮಾತನಾಡಿದರು. ನೇತಾರರಾದ ಪುಷ್ಪ ಅಮೆಕ್ಕಳ, ಲಲಿತ ಖಂಡಿಗೆ, ಸವಿತಾ ಬಾಳಿಕೆ, ಸತೀಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಭಟನೆಯ ಅಧ್ಯಕ್ಷತೆಯನ್ನು ಪಂಚಾಯತ್ ಸಮಿತಿ ಅಧ್ಯಕ್ಷ ಉದಯ ಚೆಟ್ಟಿಯಾರ್ ವಹಿಸಿದ್ದರು. ನಾರಾಯಣ ಅಡ್ಕಸ್ಥಳ ಸ್ವಾಗತಿಸಿ, ಶಿವರಾಮ ವಂದಿಸಿದರು.