HEALTH TIPS

ಶುದ್ದ ಸಾವೇರಿಯ ಯಕ್ಷ ಮಾಂತ್ರಿಕ ತೆಂಕಬೈಲು ಭಾಗವತರು ಅಸ್ತಂಗತ

  ಕಾಸರಗೋಡು: ತೆಂಕಬೈಲು ಶೈಲಿ ಎಂದೇ ಪ್ರಖ್ಯಾತ...ರಂಗಕ್ರಮ, ಅರ್ಥ ಜ್ಞಾನ,ಶೃತಿ ಜ್ಞಾನ, ಪ್ರಸಂಗದ ಅಪಾರ ಜ್ಞಾನಕಾಶಿಯೆನಿಸಿದ್ದ ತೆಂಕಬೈಲು ತಿರುಮಲೇಶ್ವರಿ ಶಾಸ್ತ್ರಿ(76) ಅಲ್ಪಕಾಲದ ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದವರು ಇಂದು ಬೆಳಿಗ್ಗೆ ನಿಧನರಾದರು.
    ಪೆರ್ಲದ ಪಡ್ರೆಚಂದು ಸ್ಮಾರಕ ಯಕ್ಷಗಾನ ಕೇಂದ್ರದ ಭಾಗವತಿಕೆಯ ಗುರುಗಳಾಗಿ ಅನೇಕ ವರ್ಷಗಳಿಂದ ಹಲವು ಶಿಷ್ಯಂದಿರನ್ನು ನಿರ್ಮಾಣಮಾಡಿದ್ದ ಇವರು, ದಕ್ಷಿಣ ಕನ್ನಡ ಜಿಲ್ಲೆ ವಿಟ್ಲ ಕನ್ಯಾನ ಸಮೀಪದ ಕರೋಪಾಡಿ ಗಡಿ ಗ್ರಾಮದ ತೆಂಕಬೈಲಲ್ಲಿ ವಾಸಿಸುತ್ತಿದ್ದು ಪ್ರಸಿದ್ದ ಚಕ್ರಕೋಡಿ ವೈದಿಕ ಮನೆತನದವರಾಗಿದ್ದರು. ತೆಂಕುತಿಟ್ಟಿನ ಖ್ಯಾತ ಭಾಗವತ, ಪ್ರಸಂಗಕರ್ತ ಮಾಂಬಾಡಿ ಗುರುಗಳ ನೆಚ್ಚಿನ ಶಿಷ್ಯರಾಗಿದ್ದರು. ಕರ್ನಾಟಕ ಸಂಗೀತವನ್ನು ಕನ್ಯಾನದ ವಿದ್ವಾನ್ ಗಣಪತಿ ಭಟ್ ಅವರಿಂದ ಕರಗತಮಾಡಿದ್ದರು. ಕೊಳಲುವಾದಕರೂ ಆಗಿದ್ದರು.
   ರಂಗದಲ್ಲಿ ಸರಳ ಸಜ್ಜನ ವ್ಯಕ್ತಿತ್ವದವರಾಗಿ ಕಲಾವಿದರೊಂದಿಗೆ ಮಿತಭಾಷಿಕರಾಗಿ ಪಾರಂಪರಿಕ ಶೈಲಿಯ ಪ್ರದರ್ಶನಗಳಿಗೆ ಅಪೂರ್ವ ಕಾಣ್ಕೆಯನ್ನಿತ್ತ ಮಹನೀಯರಾಗಿದ್ದಾರೆ. ಹಲವು ಮೇಳಗಳಲ್ಲಿ 20 ವರ್ಷಗಳಿಗಿಂತಲೂ ಹೆಚ್ಚು ಕಾಲ ಭಾಗವತರಾಗಿದ್ದು ಬಳಿಕ ಹವ್ಯಾಸಿ ಕಲಾವಿದರಾಗಿ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಾದ್ಯಂತ ಅಸಂಖ್ಯ ಪ್ರದರ್ಶನಗಳಿಗೆ ಭಾಗವತಿಕೆಮಾಡುವ ಮೂಲಕ ತೆಂಕಬೈಲು ಶೈಲಿಯನ್ನು ನಿರ್ಮಿಸಿ ಸಾವಿರಾರು ಅಭಿಮಾನಿಗಳ ಸೃಷ್ಟಿಗೆ ಕಾರಣರಾಗಿದ್ದರು.

  
ಮಲ್ಲ, ಮಧೂರು, ಕುಂಟಾರು, ಬಪ್ಪನಾಡು, ಕುಂಡಾವು, ಸುಂಕದಕಟ್ಟೆ ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಪಟ್ಟಾಜೆ ಪ್ರಶಸ್ತಿ(2003), ದಿವಾಣ ಪ್ರಶಸ್ತಿ(2006), ಉಡುಪಿಯ ಯಕ್ಷಗಾನ ಕಲಾರಂಗ ಪ್ರಶಸ್ತಿ(2011)ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ(2011),ಸೂಡ ಸುಬ್ರಹ್ಮಣ್ಯ ಯಕ್ಷಭಾರತಿಯ ತುಳುನಾಡ ಸಿರಿ ಪ್ರಶಸ್ತಿ(2012), ಕುರಿಯ ವಿಠಲಶಾಸ್ತ್ರಿ ಪ್ರಶಸ್ತಿ ಸಹಿತ ಅನೇಕಾನೇಕ ಪ್ರಶಸ್ತಿಗಳು ಲಭಿಸಿವೆ.
   ಶಾಸ್ತ್ರಿಗಳ ಶುದ್ದ ಸಾವೇರಿ ರಾಗದ ಭಾಗವತಿಕೆ ಅಭಿಮಾನಿಗಳ ಪಾಲಿಗೆ ಎಂದೂ ಮರೆಯಲಾಗದ ಅನುಭೂತಿಯಾಗಿದ್ದು ಪರವಶಗೊಳಿಸುವ ಅವರ ರಾಗಶೈಲಿ ಅತ್ಯಪೂರ್ವವಾಗಿ ಗಮನ ಸೆಳೆದಿವೆ.
    ಮೃತರು ಪತ್ನಿ, ಪುತ್ರ ಹವ್ಯಾಸಿ ಭಾಗವತ, ಶಿಕ್ಷಕ ಮುರಳೀಕೃಷ್ಣ ಶಾಸ್ತ್ರಿ ಸಹಿತ ಇಬ್ಬರು ಪುತ್ರಿಯರು, ಅಪಾರ ಬಂಧು-ಮಿತ್ರರು, ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸಂಜೆ ಸ್ವಗೃಹದಲ್ಲಿ ನೆರವೇರಿತು.      
             ನುಡಿ ನಮನ: ಸಬ್ಬಣಕೋಡಿ ರಾಮ ಭಟ್(ನಿರ್ದೇಶಕರು ಪಡ್ರೆಚಂದು ಯಕ್ಷಗಾನ ಕೇಂದ್ರ ಪೆರ್ಲ)
*ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು.ಪಾಠದಲ್ಲಿ ಅಪಾರ ಶ್ರದ್ಧೆ. ಶಿಷ್ಯರು ತಪ್ಪಿದರೆ ಸಿಟ್ಟಿಗಿಂತ ಬೇಸರಿಸುವ ಸರಳ,ಸಜ್ಜನ ಆತ್ಮೀಯ ನಮ್ಮಗುರುಗಳು* ಪಡ್ರೆ ಚಂದುಸ್ಮಾರಕ ಯಕ್ಷಗಾನ ಕೇಂದ್ರ ನಾನು ನನ್ನ ಗುರುಗಳ ಹೆಸರಿನಲ್ಲಿ ಸ್ಥಾಪಿಸಿದಾಗ ಕೇವಲ ನಾಟ್ಯ ತರಬೇತಿ ಮಾತ್ರ ಇತ್ತು. ಆದರೆ ಹಿಮ್ಮೇಳ ತರಬೇತಿ ಆಗ ಬೇಕೆಂದು ನನ್ನ ಶಿಷ್ಯನಾದ ಅವಿನಾಶ ಶಾಸ್ತ್ರಿ ಹೇಳಿಕೆಯನ್ನು ಮುಂದಿಟ್ಟ.ಹಾಗೆ ಗುರುಗಳಾಗಿ ತೆಂಕಬೈಲು ತಿರುಮಲೇಶ್ವರ ಶಾಸ್ತ್ರೀಯವರನ್ನು ಆಹ್ವಾನಿಸುವುದೆಂದು ತೀರ್ಮಾನಿಸಿದೆ.ಅವರ ಮನೆಗೆ ಹೋದೆ. ಅಲ್ಲಿ ಅವರಲ್ಲಿ ವಿಚಾರವನ್ನು ಮಂಡಿಸಿದಾಗ "ರಾಮ, ತರಬೇತಿಗೆ ಯಾರು? ಬರುತ್ತಾರೆ ಹೇಳು. ಆರಂಭಿಕವಾಗಿ ಬರುತ್ತಾರೆ. ಮತ್ತೆ ಒಬ್ಬೊಬ್ಬರೇ ಬಿಡುತ್ತಾರೆ. ಕಡೇಗೆ ನಾನು ಗುರು ಮಾತ್ರ". 'ಭಾಗವತಣ್ಣಾ, ನೀವು ಹೇಳಿದ ಮಾತು ಸರಿ.ಆದರೆ ಇಲ್ಲಿ ಗುರುಗಳಾದ ಪಡ್ರೆಚಂದುರವರ ಅನುಗ್ರಹ, ಮತ್ತು ಶಾರದಾದೇವಿಯ ಕೃಪಾ ಕಟಾಕ್ಷ ಇದೆ. ಬನ್ನಿ, ನಮ್ಮ ಸಂಸ್ಥೆಗೆ ಅನುಗ್ರಹಿಸಿ'ಎಂದು ಕೇಳಿಕೊಂಡೆ.ಹಾಗೆ ಸಮ್ಮತಿಸಿದರು. ಅವರು ಗುರುಗಳಾಗಿ ನಮ್ಮ ಕೇಂದ್ರದಕ್ಕೆ ಆಗಮಿಸಿದರು. ಆರಂಭದಲ್ಲಿ ಅವಿನಾಶ ಶಾಸ್ತ್ರಿ, ಡಾ ಯಸ್. ಯನ್. ಭಟ್, ಮಹಾಬಲಭಟ್ ಮೂಲಡ್ಕ ಹೀಗೆ ಕೆಲವು ಮಂದಿ ಭಾಗವತಿಕೆ ಕಲಿಯಲು ಆರಂಭಿಸಿದರು.ಆರಂಭದಲ್ಲೇ ಮೂಲ ಪಾಠವನ್ನು ಹೇಳಿಕೊಡುತ್ತಾರೆ. *ಅಂದರೆ ಪೂರ್ವರಂಗ, ಆಮೇಲೆ ರಂಗಪ್ರವೇಶ*. ಮತ್ತೆ *ಪ್ರಸಂಗದ ಹಾಡುಗಾರಿಕೆ* ಪಾಠ. ಈ ರೀತಿ ಅವರ ಪಾಠಗಳ ಕ್ರಮಗಳು. ಆದರೆ ಅವರು ಪಾಠಗಳನ್ನು ಬಹಳ ಸರಳ ರೀತಿಯಲ್ಲಿ ಹೇಳಿ ಕೊಡುತ್ತಾರೆ. ವಿದ್ಯಾರ್ಥಿಗಳಿಗೆ ಅರ್ಥ ಆಗುವ ರೀತಿಯಲ್ಲಿ ಪಾಠ ಕೊಡುವುದು ಕ್ರಮ.ಅವರನ್ನೇ ಗುರುಗಳು ಅನ್ನುವುದು. ಅಂತಹ ಒಬ್ಬ ಸಮರ್ಥ ಗುರುಗಳು ತೆಂಕಬೈಲು.ಆರಂಭದ ಒಂದು ತಂಡ ಭಾಗವತರಾಗಿ ಸಿದ್ಧರಾದರು. ಅವರ ಶಿಷ್ಯರು ಪ್ರಸಂಗದಲ್ಲು ಹಾಡುವುದಕ್ಕೆ ಸಮರ್ಥರು.ತೆಂಕಬೈಲು ಗುರುಗಳು ಶಿಷ್ಯರಿಗೆ ರಂಗ ನಡೆ, ಪ್ರಸಂಗದಲ್ಲಿ ಭಾವನೆಗೆ ಸರಿಯಾಗಿ ರಾಗವನ್ನು ಹೇಳಿ ಕೊಡುತ್ತಾರೆ. *ಶಿಷ್ಯರು ತಪ್ಪಿದರೆ ಅವರಿಗೆ ಸಿಟ್ಟಿನಿಂದಲೂ ಹೆಚ್ಚು ಬೇಸರ ಆಗುತ್ತಿತ್ತು*. ನನ್ನಲ್ಲಿ ಆ ವಿಚಾರವನ್ನು ಹೇಳಿ ಅವರು ಮಕ್ಕಳು ಕಲಿಯುವುದಿಲ್ಲ. ಕಲಿಯಲು ಹೇಳು ಎನ್ನುತ್ತಿದ್ದರು. ನಮ್ಮಲ್ಲಿ ವಿದ್ಯಾರ್ಥಿಗಳಿಗೆ, ಗುರುಗಳಿಗೆ , ಪೆÇೀಷಕರಿಗೆ ಊಟದ ವ್ಯವಸ್ಥೆ ಇದೆ. ಆದರೆ ಊಟಕ್ಕೆ ಕರೆಯುವಾಗ ಗುರುಗಳು ಬರುವುದು ಬಹಳ ನಿಧಾನ ಯಾಕೆ ಅಂದರೆ ಪಾಠದ ಶ್ರದ್ಧೆ. ಮಧ್ಯಾಹ್ನದ ಒಂದು ಘಂಟೆಗೆ ಭೋಜನದ ಸಮಯ. ತೆಂಕಬೈಲು ಗುರುಗಳು ಊಟಕ್ಕೆ ಬರುವಾಗ 3..00 ಘಂಟೆ ಆಗುತ್ತಿತ್ತು. ಅಂತಹ ಒಬ್ಬ ಪ್ರಾಮಾಣಿಕ ಗುರುಗಳವರು.ತಾನು ಗುರುವೆಂಬ ಅಹಂಕಾರ ಅವರಲ್ಲಿ ಇಲ್ಲ.ಶಿಷ್ಯರನ್ನು ಪ್ರೀತಿಯಿಂದ ಮಾತನಾಡಿಸಿ  ಯಕ್ಷಗಾನವನ್ನು ಹೇಳಿ ಕೊಡುತ್ತಿದ್ದರು.ಅವರ ಪರಿಶ್ರಮದ ಫಲವಾಗಿ  ಕೇಂದ್ರದಲ್ಲಿ ಹಿಮ್ಮೇಳಕ್ಕೆ 40 ವಿದ್ಯಾರ್ಥಿಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಕಲಿಯಲು ಬರುತ್ತಿದ್ದರು.ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.ನಾವು *ಅಡ್ಕಸ್ಥಳ ಪ್ರಶಸ್ತಿ* ಯನ್ನು ನೀಡಿದ್ದೇವೆ. ಹಲವಾರು ಕಡೆ ಅವರಿಗೆ ಪ್ರಶಸ್ತಿ ಸನ್ಮಾನಗಳು ಆಗಿವೆ.ಅವರಿಗೆ ನಮ್ಮ ಕೇಂದ್ರಕ್ಕೆ ತರಬೇತಿ ನೀಡಲು ಬರುವುದು ಅಂದರೆ ಬಹಳ ಇಷ್ಟ. ಪ್ರತಿ ತರಬೇತಿಯಲ್ಲು ನಡೆದ ವಿಚಾರವನ್ನು ಅವರ ಸೊಸೆ ವಿದ್ಯಾಳಲ್ಲಿ ಹೇಳುತ್ತಿದ್ದರು . "ಸಬ್ಬಣಕೋಡಿ ರಾಮ, ನನ್ನನ್ನು ಚಂದ ನೋಡಿ ಕೊಳ್ಳುತ್ತಾನೆ. ಊಟದ  ಕಾಫಿ , ವ್ಯವಸ್ಥೆ ಬಹಳ ಚೆನ್ನಾಗಿದೆ.ಕೇಂದ್ರವನ್ನು ಅಚ್ಚು ಕಟ್ಟಾಗಿ ನಡೆಸುತ್ತಾನೆ. ಯಾರಿಂದಲೂ ಸಾಧ್ಯವಿಲ್ಲ. ಮೆಚ್ಚಲೇ ಬೇಕು" ಅನ್ನುತ್ತಿದ್ದರಂತೆ.ತೆಂಕಬೈಲು ಗುರುಗಳು ಇಲ್ಲದೆಯೇ ನಮ್ಮ ಕೇಂದ್ರ ಬಡವಾಯಿತು. ಒಂದು ತಿಂಗಳ ಹಿಂದೆ ವಿಟ್ಲದಲ್ಲಿ ನನಗೆ ಗಂಡ ಹೆಂಡತಿ ಇಬ್ಬರೂ ಕಾಣ ಸಿಕ್ಕಿದರು. ಒಟ್ಟಿಗೇ ಹೋಟೇಲಿಗೆ ಹೋಗಿ ತಿಂಡಿಯನ್ನು ತಿಂದು ಕಾಫಿಯನ್ನು ಕುಡಿದು ತುಂಬಾ ಹೊತ್ತು ಮಾತನಾಡಿ ಅಲ್ಲಿಂದ ನಿರ್ಗಮಿಸಿದ್ದೇವೆ.ಆ ಮೇಲೆ ಅವರನ್ನು ನೋಡಿದ್ದು ನಾನು ಆಸ್ಪತ್ರೆಯಲ್ಲಿ 'ಕೋಮ' ಪರಿಸ್ಥಿತಿಯಲ್ಲಿ ಇದ್ದಾಗ. ಆದರೆ ಅವರ ನೆನಪು ನಮ್ಮಲ್ಲಿ ಸದಾ ಇದೆ. *ತೆಂಕಬೈಲು ಶೈಲಿ* ಯೆಂದೇ ಖ್ಯಾತಿ ಪಡೆದ ಭಾಗವತರು ನಮ್ಮ ಗುರುಗಳು.ಅವರ ಆತ್ಮಕ್ಕೆ ನಮೋ ನಮಃ  
        ಬರಹ : ಸಬ್ಬಣಕೋಡಿ ರಾಮ ಭಟ್, ನಿರ್ದೇಶಕರು,ಪಡ್ರೆ ಚಂದು ಸ್ಮಾರಕ ಯಕ್ಷಗಾನ ಅಧ್ಯಯನ ಕೇಂದ್ರ ,ಪೆರ್ಲ.671 552.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries