ಕಾಸರಗೋಡು: ಚಿನ್ನ ಕಳ್ಳ ಸಾಗಾಟ ಹಾಗೂ ಜ್ಯುವೆಲ್ಲರಿ ಮೂಲಕ ಠೇವಣಿದಾರರಿಗೆ ವಂಚಿಸಿರುವ ಪ್ರಕರಣದಲ್ಲಿ ಕೇರಳದ ಆಡಳಿತ ಮತ್ತು ಪ್ರತಿಪಕ್ಷಗಳ ಹೊಂದಾಣಿಕೆ ರಾಜಕೀಯ ನಡೆಯುತ್ತಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಅಧ್ಯಕ್ಷ ಕೆ. ಸುರೇಂದ್ರನ್ ಆರೋಪಿಸಿದರು.
ಅವರು ಚಿನ್ನಕಳ್ಳಸಾಗಾಟ ಪ್ರಕರಣದಲ್ಲಿ ಉನ್ನತ ಶಿಕ್ಷಣ ಖಾತೆ ಸಚಿವ ಕೆ.ಟಿ ಜಲೀಲ್ ಹಾಗೂ ಕಾಸರಗೋಡಿನ ಜ್ಯುವೆಲ್ಲರಿ ಠೇವಣಿದಾರರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್ ರಾಜೀನಾಮೆಗೆ ಆಗ್ರಹಿಸಿ ಎನ್.ಡಿ.ಎ ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ನಿನ್ನೆ ನಡೆದ ಬೃಹತ್ ಪ್ರತಿಭಟನಾ ಸಂಗಮ ಉದ್ಘಾಟಿಸಿ ಮಾತನಾಡಿದರು.
ಕುರಾನ್ ಪವಿತ್ರ ಗ್ರಂಥದ ಮರೆಯಲ್ಲಿ ಚಿನ್ನ ಸಾಗಾಟ ನಡೆಸಿರುವ ರಾಜ್ಯ ಉನ್ನತ ಶಿಕ್ಷಣ ಖಾತೆ ಸಚಿವ ಕೆ.ಟಿ ಜಲೀಲ್ ವಿರುದ್ಧ ಐಕ್ಯರಂಗ ತೋರಿಕೆಯ ಪ್ರತಿಭಟನೆ ನಡೆಸುತ್ತಿದೆ. ಠೇವಣಿದಾರರಿಗೆ ವಂಚಿಸಿರುವ ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್ ವಿರುದ್ಧದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೆ ರಾಜ್ಯದ ಜನತೆಯನ್ನು ವಂಚಿಸುತ್ತಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕಾದ ಸರ್ಕಾರ, ಹಗರಣದಿಂದ ಪಾರಾಲು ಸಹಕಾರ ನೀಡುತ್ತಿರುವುದಾಗಿ ಆರೋಪಿಸಿದರು. ಎರಡೂ ರಂಗಗಳ ಅಪವಿತ್ರ ಮೈತ್ರಿ ಈ ನಾಡಿಗೆ ಆಪತ್ತಾಗಲಿದೆ. ಐಕ್ಯರಂಗ ಹಾಗೂ ಎಡರಂಗ ನೇತಾರರ ಭ್ರಷ್ಟಾಚಾರ ಹಗರಣಗಳ ವಿರುದ್ಧ ಎನ್‍ಡಿಎ ರಾಜ್ಯದಲ್ಲಿ ಪ್ರಬಲ ಹೋರಾಟ ನಡೆಸಲಿರುವುದಾಗಿ ತಿಳಿಸಿದರು.
ಎನ್‍ಡಿಎ ಜಿಲ್ಲಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಎನ್‍ಡಿಎ ಮಿತ್ರಪಕ್ಷಗಳ ಮುಖಂಡರಾದ ಮಾನ್ಯುವಲ್ ಕಾಪನ್, ಹರೀಶ್ಚಂದ್ರ, ಕೆ. ಬಾಬು, ಕೆ. ಪವಿತ್ರನ್, ಬಿಜೆಪಿ gರಾಷ್ಟ್ರೀಯ ಸಮಿತಿ ಸದಸ್ಯೆ ಪ್ರಮಿಳಾ ಸಿ.ನಾಯ್ಕ್, ಎಂ. ಸುಧಾಮ ಗೋಸಾಡ, ವೇಲಾಯುಧನ್, ಎ.ಟಿ ವಿಜಯನ್, ವಕೀಲ ವಿ. ಬಾಲಕೃಷ್ಣ ಶೆಟ್ಟಿ, ಸುರೇಶ್ ಕುಮಾರ್ ಶೆಟ್ಟಿ, ಕೋಳಾರ್ ಸತೀಶ್ಚಂದ್ರ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು. ಎನ್‍ಡಿಎ ಸಂಚಾಲಕ ಗಣೇಶ್ ಪಾರೆಕಟ್ಟ ಸ್ವಾಗತಿಸಿದರು.