ಉಪ್ಪಳ: ಮಂಗಲ್ಪಾಡಿಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಆಶ್ರಯದ ಡಯಾಲಿಸಿಸ್ ಘಟಕ ಮಂಗಳವಾರ ಸಂಜೆ ಲೋಕಾರ್ಪಣೆಗೊಂಡಿತು.
ಮಂಗಳವಾರ ಈ ಸಂಬಂಧ ಜರಗಿದ ಸಮಾರಂಭದಲ್ಲಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ವೀಡಿಯೋ ಕಾನ್ಪರೆನ್ಸ್ ಮೂಲಕ ಘಟಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕಾಸರಗೋಡು ಜಿಲ್ಲೆಯ ಆರೋಗ್ಯ ವಲಯ ಮುನ್ನಡೆಯಲ್ಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಶೇಷ ಪರಿಶೀಲನೆ ನೀಡುತ್ತಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿಳಿಸಿದರು.
ಹಲವು ಕಾರಣಗಳಿಂದ ಹಿಂದುಳಿದಿದ್ದ ಕಾಸರಗೋಡು ಜಿಲ್ಲೆ ರಾಜ್ಯ ಸರ್ಕಾರದ ವಿಶೇಷ ಕಾಳಜಿಯಿಂದ ಇಂದು ಪ್ರಗತಿ ಸಾಧಿಸಿದೆ. ದುರ್ಬಲವಾಗಿದ್ದ ಇಲ್ಲಿನ ಆರೋಗ್ಯ ವಲಯ ಈ ಕಳಕಳಿಯ ಹಿನ್ನೆಲೆಯಲ್ಲಿ ಸಬಲವಾಗಿದೆ. ಜಿಲ್ಲಾ ಅಸ್ಪತ್ರೆ, ಜನರಲ್ ಆಸ್ಪತ್ರೆ ಸಹಿತ ಸರ್ಕಾರಿ ಆರೋಗ್ಯಾಲಯಗಳಲ್ಲಿ ವೈದ್ಯರ ನೇಮಕಾತಿ ಹೆಚ್ಚುತ್ತಿದೆ. ವರದಿಯಾಗಿರುವ ಬರಿದಾದ ಬಹುತೇಕ ಸಿಬ್ಬಂದಿ ಹುದ್ದೆಗಳಲ್ಲಿ ನೇಮಕಾತಿ ನಡೆಯುತ್ತಿದೆ ಎಂದರು.
ಕಾಸರಗೋಡು ಮೆಡಿಕಲ್ ಕಾಲೇಜನ್ನು ಜನಸಾಮಾನ್ಯರಿಗಾಗಿ ಸೂಪರ್ ಸ್ಪಷಾಲಿಟಿ ಆಸ್ಪತ್ರೆಯಾಗಿ ಉನ್ನತಿಗೇರಿಸುವ ಯತ್ನ ನಡೆದುಬರುತ್ತಿದೆ. ಇಲ್ಲಿ ಮೊದಲ ಹಂತದಲ್ಲೇ 293 ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಈ ಸಂಬಂಧ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಸಾಧಾರಣ ಗತಿಯಲ್ಲಿ ಬೆರಳೆಣಿಕೆಯ ಹುದ್ದೆಗಳನ್ನು ಸೃಷ್ಟಿಸಿ, ನಂತರ ಹಂತಹಂತವಾಗಿ ನೇಮಕಾತಿ ನಡೆಸುತ್ತಾ ಬರಲಾಗುತ್ತದೆ. ಕಾಸರಗೋಡನ್ನು ವಿಶೇಷವಾಗಿ ಪರಿಶೀಲಿಸುತ್ತಿರುವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲೇ ಹೆಚ್ಚುವರಿ ಹುದ್ದೆಗಳ ಸೃಷ್ಟಿ ನಡೆದಿದೆ ಎಂದರು.
ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ತರಗತಿಗಳನ್ನು ಆರಂಭಿಸಲು ಮಂಜೂರಾತಿ ಲಭಿಸಲು ಅನೇಕ ಪ್ರಕ್ರಿಯೆಗಳಿವೆ. ನಂತರವಷ್ಟೇ ಕೇಂದ್ರ ಪ್ರಾಧಿಕಾರ ಅನುಮತಿ ನೀಡುತ್ತದೆ. ಈ ಸಂಬಂಧ ಕ್ರಮಗಳು ಚುರುಕಿನಿಂದ ಸಾಗುತ್ತಿವೆ. ಆರೋಗ್ಯ ವಲಯದ ಪ್ರಬಲೀಕರಣಕ್ಕಾಗಿ ಕಿಫ್ ಬಿ ಮೂಲಕ ಎರಡೂವರೆ ಕೋಟಿ ರೂ. ವೆಚ್ಚಗೊಳಿಸಲಾಗುವುದು. ಮೆಡಿಕಲ್ ಕಾಲೇಜಿನ ಮಾಸ್ಟರ್ ಪ್ಲಾನ್ ಕಿಫ್ ಬಿಗೆ ಈಗಾಗಲೇ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಅಭಿವೃದ್ಧಿ ಯಾವುದೋ ಒಂದು ವಿಭಾಗಕ್ಕೆ ಸೀಮಿತವಾಗದೆ ಎಲ್ಲ ವಲಯಗಳಿಗೂ ಸಮಾನವಾಗಿ ನಡೆಯಬೇಕು ಎಂಬ ವಿಚಾರಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡುತ್ತಿದೆ. ಸಿ.ಎಚ್.ಸಿ.ಗಳನ್ನು ತಾಲೂಕು ಆಸ್ಪತ್ರೆಗಳಾಗಿ ಬಡ್ತಿಗೊಳಿಸುವ ಯೋಜನೆಯಲ್ಲಿ ಮಂಗಲ್ಪಾಡಿ ಆರೋಗ್ಯ ಕೇಂದ್ರ ಮೊದಲ ಸಾಲಿನಲ್ಲಿದೆ. 9 ವೈದ್ಯರ, ಇನಿತರ ಸಿಬ್ಬಂದಿ ಸಹಿತ 42 ಹುದ್ದೆಗಳು ಇಲ್ಲಿ ಸೃಷ್ಟಿಗೊಂಡಿವೆ. ಈ ಹಿಂದೆ ಸಿ.ಎಚ್.ಸಿ.ಗಳ ಗುಣಮಟ್ಟವೂ ಇಲ್ಲದೇ ಇದ್ದ ಕೇಂದ್ರಗಳು ಈಗ ರಾಜ್ಯದಲ್ಲಿ ತಾಲೂಕು ಆಸ್ಪತ್ರೆಯ ಮಟ್ಟಕ್ಕೆ ಪ್ರಗತಿ ಸಾಧಿಸುತ್ತಿವೆ ಎಂದು ಹೇಳಿದರು.
ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ವರ್ಕಾಡಿ ಆರೋಗ್ಯ ಕೇಂದ್ರವನ್ನು ಕುಟುಂಬ ಆರೋಗ್ಯ ಕೇಂದ್ರವಾಗಿ ಬಡ್ತಿಗೊಳಿಸಲಾಗಿದೆ. ಪೆರ್ಲ, ಬಾಯಾರು, ಪುತ್ತಿಗೆ ಕೇಂದ್ರಗಳ ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ನಡೆದುಬರುತ್ತಿವೆ. ಮೂರನೇ ಹಂತದಲ್ಲಿ ಆರಿಕ್ಕಾಡಿ, ಮೀಂಜ, ಅಂಗಡಿಮೊಗರು ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದರು.
ಆರೋಗ್ಯ ವಲಯದ ಪ್ರಬಲೀಕರಣ ರಾಜ್ಯ ಸರ್ಕಾರದ ಯತ್ನ ಎಂದು ಸಚಿವೆ ಪ್ರತಿಪಾದಿಸಿದರು. ಕೊರೋನಾ ಮಹಾಮಾರಿ ತಂದೊಡ್ಡಿರುವ ಮುಗ್ಗಟ್ಟಿನ ಪರಿಹಾರಕ್ಕೆ ಸಾರ್ವಜನಿಕರು ಒಗ್ಗಟ್ಟಿನಿಂದ, ಕಟ್ಟುನಿಟ್ಟುಗಳನ್ನು ಪಾಲಿಸುವ ಮೂಲಕ ಹೆಗಲು ನೀಡಬೇಕು ಎಂದವರು ವಿನಂತಿಸಿದರು.
ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಪಾಲಿಸುವ ಮೂಲಕ ಸಮಾರಂಭ ಜರಗಿತು. ಶಾಸಕ ಎಂ.ಸಿ.ಕಮರುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಐಷನ್ ಫೌಂಡೇಷನ್ ಅಧ್ಯಕ್ಷ ಅಬ್ದುಲ್ ಲತೀಫ್ ಉಪ್ಪಳಗೇಟ್ ಮುಖ್ಯ ಅತಿಥಿಯಾಗಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಎ.ಡಿ.ಸಿ.ಜನರಲ್ ಜಾನ್ ವರ್ಗೀಸ್, ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ, ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತೀ ಜೆ.ಶೆಟ್ಟಿ, ವರ್ಕಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎ.ಅಬ್ದುಲ್ ಮಜೀದ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷೆ ಮಮತಾ ದಿವಾಕರ್, ಸ್ಥಾಯೀ ಸಮಿತಿ ಅಧ್ಯಕ್ಷ ಬಹರೈನ್ ಮುಹಮ್ಮದ್, ಮುಸ್ತಫಾ ಉದ್ಯಾವರ, ಫಾತಿಮಾ ಸುಹರಾ, ಬಿ.ಡಿ.ಒ. ಎನ್.ಸುರೇಂದ್ರನ್, ತಾಲೂಕು ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಚಂದ್ರಮೋಹನ್, ಬ್ಲಾಕ್ ಪಂಚಾಯತಿ ಸದಸ್ಯರು, ಜನಪ್ರತಿನಿಧಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು.