ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಯಾರು ದಳಿಕುಕ್ಕು ಶ್ರೀ ಪಂಚಲಿಂಗೇಶ್ವರ ಶಾಲೆ ಸಮೀಪದ ತೋಡಿನ ಕಾಲುದಾರಿ ಸಂಪೂರ್ಣವಾಗಿ ಜರಿದು ದಳಿಕುಕ್ಕು ಪರಿಸರದ ನಿವಾಸಿಗಳಿಗೆ ದಳಿಕುಕ್ಕು ಶಾಲೆ, ಭಜನಾ ಮಂದಿರ ಹಾಗೂ ದಳಿಕುಕ್ಕಿನ ಸಮೀಪದ ಮುಖ್ಯ ರಸ್ತೆಗಳಿಂದ ಸಂಪರ್ಕವಿಲ್ಲದಂತಾಗಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಈಗ ಮತ್ತಷ್ಟು ಕುಸಿತ ಉಂಟಾಗಿದ್ದು, ಇದರಿಂದಾಗಿ ದಳಿಕುಕ್ಕು ಶಾಲೆ ಭಾಗದಿಂದ ದಳಿಕುಕ್ಕು,ಪೆಲತ್ತಡ್ಕ ಭಾಗಗಳಿಗೆ ತೆರಳುವವರಿಗೆ ದಾರಿ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಅಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ದಳಿಕುಕ್ಕು ಶಾಲೆ ಸಮೀಪದ ತೋಡಿನ ಬದಿಯಿರುವ ಮೆಟ್ಟಲ ದಾರಿ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಆಗಸ್ಟ್ 10 ರಂದು ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷರು, ವಾರ್ಡ್ ಸದಸ್ಯರು ಸ್ಥಳಕ್ಕೆ ಆಗಮಿಸಿ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಯಾವುದೇ ರೀತಿಯ ತಾತ್ಕಾಲಿಕವಾದ ವ್ಯವಸ್ಥೆ ಇದುವರೆಗೆ ಪಂಚಾಯತಿ ಮಾಡಿಲ್ಲ ಎಂದುದೂರಲಾಗಿದೆ. ಜನಸಾಮಾನ್ಯರಿಗೆ ದಿನನಿತ್ಯದ ಕೆಲಸಗಳಿಗೆ ತೆರಳಲು ಅನಾನುಕೂಲ ಆಗುತ್ತಿದ್ದ ಈ ದಾರಿಯನ್ನು ಪಂಚಾಯತಿ ಶೀಘ್ರದಲ್ಲೇ ಮರುನಿರ್ಮಾಣ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.